Tuesday, January 17, 2012

ಎಲ್ಲೆಲ್ಲೋ ಓಡುವ ಮನಸೇ - sidlingu lyrics

ವಿಷಯ ಎಷ್ಟೇ ಚಿಕ್ಕದಿರಲಿ ಅದು ವಿಶೇಷವಾಗಿರಬೇಕು ಆಗಲೇ ತಿಳಿದುಕೊಳ್ಳಬೇಕು ಅನ್ನೋ ಹಂಬಲ ಹೆಚ್ಚಾಗುವುದು,ವಿಶೇಷವಾದದ್ದು ವಸ್ತು,ವ್ಯಕ್ತಿ,ವೃತ್ತಾಂತ ಅಲ್ಲದೇ ಇನ್ನು ವಿಧ ವಿಧವಾಗಿ ಬಣ್ಣಿಸುವಂತದ್ದಾಗಿರಬಹುದು.ಒಬ್ಬ ವಿಶೇಷವಾದ ವ್ಯಕ್ತಿ ಮಾತಾಡುವುದುಕ್ಕೆ ಶುರು ಮಾಡಿದಾಗ ನೂರು ಕಿವಿ ನಿಮಿರಬಹುದು, ವಿಶೇಷವಾದ ತಿಂಡಿ ಪದಾರ್ಥ ಸಿಗುವಂತಾದರೆ ನೂರು ನಾಲಗೆ ಜಿನುಗಬಹುದು, ವಿಶಿಷ್ಠವಾದ ಸ್ಥಳಕ್ಕೆ ಭೇಟಿ ನೀಡಲು ಆಣಿಯಾದಾಗ ನೂರು ಕಣ್ಣು ಅರಳುವ ಸಮಯ, ಇಂತಹ ಚಿಕ್ಕ ಚಿಕ್ಕ ವಿಷಯದಲ್ಲಿ ಸಿಗುವಂತಹ ಹೆಚ್ಚು ಹೆಚ್ಚು ಸಂತೋಷ ಬೆಂಡು ಬಳಲಾಗಿ ಬಸವಳಿದ ದೈನಂದಿನ ಜಂಜಾಟಕ್ಕೆ ತಣ್ಣನೆ ನೀರೆರಚಿ " ಮನಸೇ ರಿಲ್ಯಾಕ್ಸ್ ಪ್ಲೀಸ್ " ಎಂದು ಸಣ್ಣಗೆ ನಗೆ ಉಕ್ಕಿಸುವ ಸಿಹಿಯಾದ ಟಾನಿಕ್.

ಈ ಪರಿ ನನಗೆ ಇತ್ತೀಚೆಗೆ "ಸಿದ್ಲಿಂಗು" ಸಿನಿಮಾದ ಒಂದು ಹಾಡಿನ ಸಾಲುಗಳು ಕಿವಿಗೆ ಬಿದ್ದಾಗ ಆ ಟಾನಿಕ್ ಸೇವಿಸಿದ ಅನುಭವ,ತುಂಬಾ ಸೊಗಸಾಗಿ ಮೂಡಿ ಬಂದಿರೋ ಹಾಡು ಒಂದ್ ಕ್ಷಣ ಕೇಳುಗರ ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ,
ಆ ಹಾಡಿನ ಸಾಲುಗಳನ್ನು ಇಲ್ಲಿ ಹರಡಿಟ್ಟಿರುವೆ...... ಕೆದಕಿದರೆ ನಿಮಗೂ ಸಿಹಿ ಟಾನಿಕ್ ಸಿಗಬಹುದು...ಒಂದ್ ಸಲ ಟ್ರೈ ಮಾಡಿ.




ಲೂಸ್ ಮಾದ ಯೊಗೀಶ್ ಮತ್ತು ರಮ್ಯ ಅಭಿನಯದ ,ಅನೂಪ್ ಸೀಳಿನ್ ಸಂಗೀತ ನೀಡಿ ಅವಿನಾಶ್ ಚೆಬ್ಬಿರವರ ಕಂಠದಲ್ಲಿ ಮೂಡಿ ಬಂದಿರುವ ಸುಮಧುರ ಗೀತೆಯ ಸುಂದರ ಸಾಲುಗಳು.

|| ಎಲ್ಲೆಲ್ಲೋ ಓಡುವ ಮನಸೇ ಓsss
ಯಾಕಿಂತ ಹುಚ್ಚುಚ್ಚು ಮನಸೇ
ಇಲ್ಲದ ಸಲ್ಲದ ತರಲೇ ಹಾsss
ಹೋದಲ್ಲಿ ಬಂದಲ್ಲಿ ತರವೇ ||

ಹರಷುವ ಮುಂದಿಡುವೇ ವ್ಯಸನವ ಬೆಂಬಿಡುವೆ
ಬಂದರು ಅಳುವ ನಗಿಸಿ ನಲಿವ ಮನವೇ

|| ಎಲ್ಲೆಲ್ಲೋ ಓಡುವ ಮನಸೇ ಓsss
ಯಾಕಿಂತ ಹುಚ್ಚುಚ್ಚು ಮನಸೇ
ಇಲ್ಲದ ಸಲ್ಲದ ತರಲೇ
ಹೋದಲ್ಲಿ ಬಂದಲ್ಲಿ ತರವೇ ||

ನಾನು ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಶ
ಎಲ್ಲಾ ಶೂನ್ಯ ಎನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಶ ನಿಷ್ಕಲ್ಮಶ ತರ ತರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ
ಇದ್ದರೂ ಜೊತೆಗೆ ದೂರ ಇರುವ ಮನವ

|| ಎಲ್ಲೆಲ್ಲೋ ಓಡುವ ಮನಸೇ ಓsss
ಯಾಕಿಂತ ಹುಚ್ಚುಚ್ಚು ಮನಸೇ
ಇಲ್ಲದ ಸಲ್ಲದ ತರಲೇ
ಹೋದಲ್ಲಿ ಬಂದಲ್ಲಿ ತರವೇ ||


ಬೇಕು ಬೇಡ ಎನ್ನುವ ಗೊಂದಲ ಸೃಷ್ಠಿಸುವ ಮಾಯೇ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೇ ನೀ
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲ ನಿನ್ನ ( )
ಕಂಡರು ಸಾವು ಬದುಕು ಗೆಲ್ಲುವ ಒಲವೇ

ಎಲ್ಲೆಲ್ಲೋ ಓಡುವ ಮನಸೇ ಓsss

Sunday, August 8, 2010

47ರ ಸ್ವಾತಂತ್ರ್ಯ


"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಮರಳಿ ಬರುತಿದೆ" ಸಾಲುಗಳು ಕೇವಲ ಬೇವು ಬೆಲ್ಲ ಸಂಭ್ರಮದ ಯುಗಾದಿಗಷ್ಟೆ ಅಲ್ಲದೆ ,೬೩ ವರ್ಷಗಳಿಂದ ಆಗಸ್ಟ್ 15ರಂದು ನೂರು ಕೋಟಿಗೂ ಹೆಚ್ಚು ಭಾರತೀಯರಲ್ಲಿ ನಿದ್ರಿಸುತ್ತಿರುವ ದೇಶಪ್ರೇಮವನ್ನು ಬಡಿದೆಬ್ಬಿಸಲು ಸ್ವಾತಂತ್ರ್ಯ ಹಬ್ಬ ಕೂಡ ಮರಳಿ ಮರಳಿ ಬರುತಿದೆ..
ಸರ್ಕಾರಿ ರಜೆ ದಿನವಾದ ಅಂದು ಬೆಳ್ಳಿಗ್ಗೆ 9 ರೊಳಗೆ ಸರ್ಕಾರಿ ಕಛೇರಿಗಳು,ಶಾಲಾ-ಕಾಲೇಜುಗಳುಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಜನ ಗಣ ಮನ ವನ್ನು ಕೋರಸ್ ಜೊತೆಗೂಡಿ ಹಾಡಿ , ಮುಖ್ಯ ಅತಿಥಿಯ ಅತಿ ಮುಖ್ಯ ಮಾತುಗಳನ್ನು ಯಾವಾಗ ಮುಗಿಯುತ್ತದೆಯೊ ಎಂಬ ನಿರೀಕ್ಷೆಯಲ್ಲಿ ಕಾದು,ಕೊನೆಗೆ ಸಿಹಿ ತಿಂದು ಮನೆಗೆ ಮರಳುವುದು ವಾಡಿಕೆ.... ಮನೆ ತಲುಪಿದ ನಂತರ ಕನ್ನಡ ವಾಹಿನಿಯಲ್ಲಿ " ಮುತ್ತಿನ ಹಾರ " ಅಥವಾ ದೂರದರ್ಶನದಲ್ಲಿ " ರೋಜಾ" ಚಲನಚಿತ್ರವನ್ನು ವೀಕ್ಷಿಸಿ ಸಂಜೆ ಮಕ್ಕಳನ್ನು ಕರೆದು ಕೊಂಡು ಪಾನಿಪೂರಿ ಮೇಯ್ದು ಪುನಃ ನಾಳೆ ಕೆಲಸಕ್ಕೆ ಹೋಗಬೇಕಲ್ವ ಮಾರಾಯ ಎಂಬ ಸೋಮಾರಿತನ ಮಿಶ್ರಿತ ನಿರಾಸೆಯೊಂದಿಗೆ ರಾತ್ರಿ ನಿದ್ದೆಗೆ ಜಾರಿದರೆ ಅಂದಿಗೆ ನಮ್ಮ ಸ್ವಾತಂತ್ರ್ಯ ಹಬ್ಬಕ್ಕೆ ತೆರೆ ಬಿದ್ದಂತಾಗುತ್ತದೆ. ಇದರ ಮಧ್ಯೆ ಟಿ.ವಿ , ಫ್ರಿಡ್ಜ್ ಮೇಲೆ ತ್ರಿವರ್ಣದ ಚಿತ್ರಗಳನ್ನು ಅಂಟಿಸಿ, ತಮ್ಮ ವಾಹನಗಳ ಹ್ಯಾಂಡಲ್ ಗೆ ಚಿಕ್ಕ ಧ್ವಜವನ್ನು ಸಿಕ್ಕಿಸಿ ಪಡೆವ ಅನಂದ ಕೆಲವರದ್ದು.


ಹೇಗಿದ್ವಿ- ಹೇಗಾದ್ವಿ ಎಂಬ ಭೂತಾಕಾರದ ಪ್ರಶ್ನೆಗಳಿಗೆ ಉತ್ತರ ಸಿಕ್ಕರೂ ಸಿಗದ ಹಾಗೆ,ಪರಿಹಾರ ಕಂಡರೂ ಕಾಣದ ರೀತಿ ,ವಿಶ್ವಾಸಕ್ಕೆ ದ್ರೋಹ ಬಗೆದು ,ಅಪನಂಬಿಕೆಯನ್ನೇ ನಂಬಿ,ಉಪಕಾರ,ಕೃತಜ್ನತೆಯ ಅರಿವೆ ಇಲ್ಲದೆ,ಕೇವಲ ನಾಲಗೆಯ ಮೇಲೆ ನಿಂತಿರುವ ದೇಶಕ್ಕೆ ಸ್ವಾತಂತ್ರ್ಯದ ೬೩ನೇ ಹುಟ್ಟುಹಬ್ಬ.
ಜಾತಿ,ಮತ,ವರ್ಗ,ವರ್ಣ,ಮೇಲು,ಕೀಳೆಂಬ ಭೇಧವಿಲ್ಲದ ಹಾಗೆ ಆಚರಿಸುವ ಈ ರಾಷ್ಟ್ರೀಯ ಹಬ್ಬದಂದು ಸಮಸ್ತ ಭಾರತೀಯರಿಗೆ ನನ್ನ ಶುಭಾಶಯಗಳು.
1834ರ ಸಮಯ, ಆಂಗ್ಲರು ಆಳುವ ಕಾಲದಲ್ಲಿ ಭಾರತದಲ್ಲಿದ್ದ ಒಬ್ಬ ಆಂಗ್ಲ ಅಧಿಕಾರಿ ಲಾರ್ಡ್ ಥಾಮಸ್ ಬ್ಯಾಬಿಂಗ್ಟನ್ ಮ್ಯಾಕ್ಯುಲೆ ಆಗಿನ ಭವ್ಯ ಭಾರತದ ಬಗ್ಗೆ ಕೆಳಕಂಡ ಮಾತುಗಳನ್ನು ಹೇಳಿದ್ದನು.ಈ ಸಂದರ್ಭದಲ್ಲಿ ಈ ಮಾತುಗಳು ಯಾವ ರೀತಿ ಪಾತ್ರಧಾರಿಯಾಗುವುದೆಂದು ಊಹಿಸಲೂ ತುಸು ಕಷ್ಟ.

""ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದ್ದೇನೆ,ಇಲ್ಲಿ ಒಬ್ಬ ಭಿಕ್ಷುಕನಾಗಲಿ ,ಕಳ್ಳನಾಗಲಿ ನಾನು ಕಂಡಿಲ್ಲ, ಮಾನವೀಯತೆ ಹಾಗೂ ಸಮರ್ಥ ಗುಣಗಳಿಂದ ಕೂಡಿರುವ ಇಷ್ಟು ಸಂಪಧ್ಬರಿತವಾಗಿರುವ ದೇಶವನ್ನು ಕೊಳ್ಳೆ ಹೊಡೆಯುವ ಏಕೈಕ ಮಾರ್ಗವೆಂದರೆ ಅದರ ಬೆನ್ನೆಲುಬಿನಂತಿರುವ ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುರಿಯುವುದು,ಅದಕ್ಕಾಗಿ ನಾವು ಅದರ ಪುರಾತನ ಶಿಕ್ಷಣ ಹಾಗೂ ಸಂಸ್ಕಾರ,ಸಂಸ್ಕೃತಿಯನ್ನು ಬದಲಿಸಿಬೇಕು ,ಆಗ ಭಾರತೀಯರಲ್ಲಿ ತಮ್ಮ ಭಾಷೆಗಿಂತ ವಿದೇಶಿ ಭಾಷೆ ,ಸಂಸ್ಕೃತಿಯೇ ಹೆಚ್ಚು ಉತ್ತಮ ಎನಿಸುವುದು, ನಂತರ ತಮ್ಮ ಭಾಷಾಭಿಮಾನ,ಸಾಂಸ್ಕೃತಿಕ ಮೋಹವನ್ನು ತೊರೆದು ನಮಗೆ ಹೇಗೆ ಬೇಕೂ ಹಾಗೆ ಇರುತ್ತಾರೆ,ಆಗ ಭಾರತ ಸಂಪೂರ್ಣವಾಗಿ ನಮ್ಮ ವಶದಲ್ಲಿರುತ್ತದೆ.""

176 ವರ್ಷಗಳ ಹಿಂದಿನ ಭಾರತ ಇದಾಗಿತ್ತು.... 176 ವರ್ಷಗಳ ನಂತರದ ಭಾರತ ಈಗ ನಮ್ಮ ಕಣ್ಮುಂದಿದೆ....

Wednesday, June 9, 2010

ಸುದ್ದಿ ಕದ್ದು ...3 !!

ಸುದ್ದಿ>>>
"ಅಗ್ನಿ" ಶ್ರೀಧರ್ ನಿರ್ದೇಶನದ "ತಮಸ್ಸು" ಬಿಡುಗಡೆಗೆ ನೂರೆಂಟು ವಿಘ್ನ.. ಮೊದಲು ಸೆನ್ಸಾರ್ ,ಈಗ ಚಿತ್ರ ಪ್ರದರ್ಶಕರ ವಿರೋಧ.

ಅಗ್ನಿ ಶ್ರೀಧರ್ ರವರಿಗೆ ಇದು ಖಂಡಿತ ""ಅಗ್ನಿ"" ಪರೀಕ್ಷೆಯೆ ಸರಿ.....

Sunday, June 6, 2010

""ನಾಯಿ ನನ್ ಮಗು""





ಈ ಚಿತ್ರ ""ಕನ್ನಡ ಪ್ರಭ "" ಪತ್ರಿಕೆಯಲ್ಲಿ ಪ್ರಕಟವಾಗಿತ್ತು.,,

ಮಗು ನೆಲದ ಮೇಲೆ ,ನಾಯಿ ಭುಜದ ಮೇಲೆ....ಪಾಪ ನಾಯಿ ಕಾಲಿಗೆ ಪೆಟ್ಟಾಗಿ ನಡೆಯುವುದಕ್ಕೆ ಆಗುತ್ತಿರಲ್ಲಿಲ್ಲ ಅನ್ನಿಸುತ್ತೆ....ಏನೇ ಆದರು ನಮ್ಮ ಬೆಂಗಳೂರಿನವರಿಗೆ ಶ್ವಾನ ಪ್ರೇಮ ತುಸು ಹೆಚ್ಚು ಅಂತಾನೇ ಹೇಳಬೇಕು,ಅದಕ್ಕೆ ಬೀದಿ ಬೀದೀಲೂ ನಾಯಿಗಳದೇ ದರ್ಬಾರು...
ಇತ್ತೀಚೆಗೆ ನನ್ ಫ್ರೆಂಡ್ ಜಿ-ಟಾಕ್ ನಲ್ಲಿ ಚಾಟ್ ಮಾಡಬೇಕಾದರೆ

""ಮಗಾ , ಮನೆಗೆ ನಾನೊಂದು ಹೊಸ ""ಡಾಗಿ"" ತಂದೆ ...."" ಅಂತ ಹೇಳಿದ

"" ಡಾಗಿ ಅಂದ್ರೆ ನಾಯಿ ತಾನೆ ..."" ಅಂತ ನಾನು ಸುಮ್ಮನೆ ಕಿಚಾಯಿಸಿದೆ

"" ಹೂಂ ಮಗಾ....ಡಾಗಿ .."" ನಾಯಿ ಅನ್ನೋ ಪದ ಉಪಯೋಗಿಸುವುದಕ್ಕೆ ತಯಾರಾಗಿಲ್ಲ ದೊರೆಗಳು....

"" ಅಲ್ವೋ ಮನೆಯಲ್ಲಿ ಹುಲಿ ತರಹ ಒಂದ್ ನಾಯಿ ಇಡ್ಕೊಂಡಿರುವಾಗ ಇನ್ನೊಂದ್ ನಾಯಿ ಯಾಕಪ್ಪ ಬೇಕಾಗಿತ್ತು ...ಸರಿ...ಅದನ್ನ ನಾಯಿ ಅಂತ ಕನ್ನಡದಲ್ಲಿ ಹೇಳ್ಬೋದಲ್ವ.. ಅದ್ಯಾಕೆ ಡಾಗಿ ಡಾಗಿ ಅಂತ ಹೇಳ್ತಿದ್ಯಾ..."" ಪುನಃ ರೇಗಿಸಿದೆ...


ಈ ಸಲ ಆ ಕಡೆಯಿಂದ ಏನು ಉತ್ತರ ಬರ್ಲೇ ಇಲ್ಲ.....ಬದಲಿಗೆ ಟಾಪಿಕ್ಕೆ ಚೇಂಜ್ ಮಾಡ್ಬಿಟ್ಟ ...

ಇದಷ್ಟೆ ಅಲ್ಲಾ ....ತುಂಬಾ ಕಡೆ ನಾನು ಗಮನಿಸಿದ್ದೀನಿ...ನಾಯಿನಾ ನಾಯಿ ಅಂದ್ರೆ ಅದರ ಯಜಮಾನ ಮುಖ ಸಿಂಡರಿಸಿಕೊಂಡು "" ಅದರ ಹೆಸ್ರು ಟಾಮಿ "" ಅಂತ ನಾಯಿ ಅಂತ ಹೇಳಿದವರ ಮೇಲೆ ಗದರಿಸುತ್ತಾನೆ....ಟಾಮಿ,ಜಿಮ್ಮಿ,ವಿಕ್ಕಿ ಅದು ಇದು ಅಂತ ನಾಯಿಗೆ ಇಂಗ್ಲೀಷ್ ಹೆಸ್ರು ನಾಮಕರಣ ಮಾಡುವರಿಗೆ ಈ ಹೆಸ್ರನ್ನು ಮನುಷ್ಯರಿಗೂ ಸಹ ಇಟ್ಟಿರ್ತಾರೆ ಅನ್ನೋದು ಅರಿವಿರೋಲ್ವೆ......ನಾಯಿನ ನಾಯಿ ಅಂದ್ರೆ ಏನೋ ದೊಡ್ಡ ಅಪರಾಧದ ರೀತೀಲಿ ಕಾಣ್ತಾರೆ,ನಿಯತ್ತಿಗೆ ಇನ್ನೊಂದ್ ಹೆಸರೆ ನಾಯಿ ಅನ್ನೊ ಡೈಲಾಗ್ ಎಷ್ಟು ಫಿಲಂಗಳಲ್ಲಿ ಕೇಳಿಲ್ಲ ,ನಿಯತ್ತಿಗೆ ಹೆಸಾರಾಗಿರೋ ಜೀವಿಯನ್ನು ಅದರ ""ಹುಟ್ಟು ಹೆಸರು"" ಗೊತ್ತಿಲ್ಲದೆ ಇರುವಾಗ ಅಪ್ಪಿ ತಪ್ಪಿ ನಾಯಿ ಅಂತ ಕರೆದುಬಿಟ್ಟರೆ ಅದರ ಯಜಮಾನ ಸಾಕ್ಷಾತ್ ನಾಯಿ ತರಹ ನಮ್ಮ ಮೈ ಮೇಲೆ ಎಗರಬಹುದು.
ಹಸುವನ್ನು ಕಾಮಧೇನು ಅಂತ ಪೂಜೆ ಮಾಡ್ತೀವಿ..ಆದರೆ ಎಲ್ಲರೂ ಹಸುವಿಗೆ ಹೆಸರಿಟ್ಟಿರ್ತಾರ,ದನ ಅಂತಾನೇ ತಾನೆ ಕರೆಯೋದು,ಆಗ ಯಾರಿಗಾದರೂ ಬೇಜಾರಾಗುತ್ತ...
ಮನುಷ್ಯ ಜೀವನದಲ್ಲಿ ತನ್ನ ಮನಸ್ಸನ್ನು ತುಂಬಾ ಜನಕ್ಕೆ ಹಂಚಿರುತ್ತಾನೆ, ಅಪ್ಪ,ಅಮ್ಮ,ಮಡದಿ,ಮಕ್ಕಳು,ಸ್ನೇಹಿತರು ಅಂತ ಅವನ ಪ್ರೀತಿಗೆ ತಕ್ಕಷ್ಟು ಪೀಸ್ ಮಾಡಿರುತ್ತಾನೆ. ಅದು ಆಗಲೇ ಒಂದ್ ರೀತಿ ಅಕ್ರಮ ಸೈಟಿನಲ್ಲಿ ಚಿಕ್ಕ ಚಿಕ್ಕ ಮನೆ ಕಟ್ಟಿಕೊಂಡಿರೊ ತರಹ,ಯಾವಗ ಬೇಕಾದರು ಕಾರ್ಪೋರೇಷನ್ ಜನ ಬುಲ್ಡೋಜರ್ ತಂದು ನೆಲಸಮ ಮಾಡಬಹುದು ,ಇದೇ ಮನಸ್ಸು ಮನಸ್ಸಿನ ನಡುವೆ ನೆಡೆಯುವ ಸಂಘರ್ಷ ,ಮನಸ್ತಾಪ,ವೈ ಮನಸ್ಸು...
ಇದರ ನಡುವೆ ಮಾತು ಬಾರದಿರುವ ಮೂಕ ಪ್ರಾಣಿ ಮನುಷ್ಯನ ಮನಸ್ಸಿನಲ್ಲಿ ವಿಶಿಷ್ಟವಾದ ಜಾಗ ಕಂಡುಕೊಳ್ಳುವುದು,ತನ್ನ ಯಜಮಾನನ ಮಾತಿಗೆ ಎದುರಾಡದೆ ಬಾಲ ಅಲ್ಲಾಡಿಸಿ ಸ್ವಾಮಿ ಭಕ್ತಿ ಮೆರೆಯುವುದು,ಇಷ್ಟರಲ್ಲಿ ಮನುಷ್ಯನಿಗೆ ತನ್ನೆಲ್ಲಾ ಸಂಬಂಧಗಳಿಗಿಂತ ಇದು ಅತ್ಯಂತ ಸನಿಹವಾದುದು ಎಂದೆನಿಸಲು ಶುರುವಾಗುವಾತ್ತದೆ,ಪ್ರಾಣಿ ಜಾಗದಿಂದ ಕುಟುಂಬದ ಸದಸ್ಯನಾಗಿ ಬಡ್ತಿ ನೀಡುತ್ತಾನೆ, "ಅದು" ಬಿಟ್ಟು ನೀನು,ತಾನು,ಹೋಗೊ,ಬಾರೋ ಅಂತ ಒಬ್ಬ ವ್ಯಕ್ತಿಗೆ ಸಂಭೋದಿಸುವ ರೀತೀಲಿ ವ್ಯವಹರಿಸುತ್ತಾನೆ ,

ಆಗಲೇ ನಾವೇನಾದರೂ ನಾಯಿಯಂದರೆ ಅವನು ಗುರ್ರ್ ..... ಎನ್ನುವುದು.

Tuesday, June 1, 2010

ರವಿಚಂದ್ರನ್ -- ಹ್ಯಾಪಿ ಬರ್ತಡೇ


ಳ್ಳಿ ಮೇಷ್ಟ್ರಿಗೆ ಈ ಮೇ 30ಕ್ಕೆ 49ರ ಸಂಭ್ರಮ...ಪ್ರೇಮ ಲೋಕ ಅನ್ನೋ ಲವ್ ಸ್ಟೋರಿಯಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ ಕಿಂದರಜೋಗಿ,ಕನ್ನಡದಲ್ಲಿ ೯೦ರ ದಶಕದಲ್ಲಿ ಅಗತ್ಯವಿದ್ದ ಕ್ರಿಯೇಟಿವಿಟಿಗೆ ಜೀವ ತುಂಬಿದ ಪುಟ್ನಂಜ.
ಯಾವಾಗಲೂ ಅಂಗಿಯ ಮೊದಲೆರಡು ಗುಂಡಿಯನ್ನ ಹಾಕದೇ,ತಲೆಗೆ ಕ್ಯಾಪ್ ಹಾಕಿಕೊಂಡು,ಕುರುಚಲು ಗಡ್ಡ ಬಿಟ್ಟುಕೊಂಡು ನೇರವಾಗಿ ಮಾತಾಡುವ ಏಕಾಂಗಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ದೊಡ್ಡ ದೊಡ್ಡ ಆಕರ್ಷಕ ಸೆಟ್ ಒಳಗೆ ಹೀರೊ ಇನ್ ಸೊಂಟನ ಬಳುಕುವ ಬಳ್ಳಿಯಂತೆ ಬಾಗಿಸಿ ತಿರುಗಿಸಿ, ಬಾಯಿಗೆ ದ್ರಾಕ್ಷಿ ದಾಳಿಂಬೆ ಎಸೆಯುತ್ತಾ,ಹೊಟ್ಟೆ ಮೇಲೆ ಮೊಟ್ಟೆ ಒಡೆದು ಅಮ್ಲೆಟ್ ಹಾಕಿ ,ಹೊಕ್ಕಳ ಮೇಲೆ ಬುಗುರಿ ಆಡಿಸಿ ,ನುಗ್ಗೇಕಾಯಿಗೆ ತರಕಾರಿಗಳಲ್ಲೆ ಸ್ಪೆಷಲ್ ಸ್ಥಾನಮಾನ ತಂದುಕೊಟ್ಟ ಯುಗ ಪುರುಷ ಹೀಗೆ ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸಲಿ ಎಂದು ರಸಿಕನಿಗೆ ಹಾರೈಸೋಣ.

Sunday, May 30, 2010

ವಿಚಿತ್ರ"ವಾದ"



ಕೆ
ಲವು ವಿಚಾರಗಳು ವ್ಯಕ್ತಿಗತವಾಗಿ ಅನುಭವಿಸಿದಾಗ ಮಾತ್ರ ಅದನ್ನು ಅನುಭವ ಎನ್ನಲು ಸಾಧ್ಯ.ಇಂಗ್ಲೀಷಲ್ಲಿ ಹೇಳುವ ಹಾಗೆ "Experience can only be Experienced".ನಾವು ಯಾವುದಾದರು ವಿಷಯವನ್ನು ಪತ್ರಿಕೆಯಲ್ಲಿ ಓದಿದಾಗ,ವಾರ್ತೆಗಳಲ್ಲಿ ವೀಕ್ಷಿಸಿದಾಗ ಅಥವಾ ಕೇಳಿದಾಗ ಆ ವಿಚಾರದ ಗಾಢತೆಯ ಅರಿವಾಗುವುದು ಬಹಳಷ್ಟು ಕಡಿಮೆ.ಪ್ರತ್ಯಕ್ಷವಾಗಿ ಕಂಡಾಗ ಮಾತ್ರ ಅದರ ಆಳ - ಅಗಲದ ವಿಸ್ತಾರ ಮನದಟ್ಟಾಗುವುದು.
ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಸಮುದ್ರದಾಳದಲ್ಲಿ ಇಳಿದು ಮೀನನ್ನು ನಾಚಿಸುವ ಹಾಗೆ ಈಜುವುದು ,ಬಾನೆತ್ತರದಲ್ಲಿ ಹಾರುತ್ತಿರುವ ಹೆಲಿಕಾಪ್ಟರಿನಿಂದ ಬೆನ್ನಿಗೆ ಪ್ಯಾರಾಚೂಟ್ ಕಟ್ಟಿಕೊಂಡು ಒಂದೇ ಉಸಿರಿಗೆ ಜಿಗಿಯುವುದು,ಕೊರೆಯುವ ಚಳಿಯಲ್ಲಿ ಹಿಮಚ್ಛಾದಿತ ಪರ್ವತವನ್ನೇರಿ ಪ್ರಪಂಚವನ್ನೆ ಗೆದ್ದೆ ಎಂಬ ರೀತಿಯಲ್ಲಿ ಬೀಗುವುದನ್ನು ನೋಡಿದವರಿಗೆ ಆ ಜಾಗದಲ್ಲಿ ನಾನಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸದೆ ಇರಲಾರದು . ಜೀವನದ ಇಂತಹ ಅದಮ್ಯ ಅಪರೂಪವಾದ ರೋಮಾಂಚನಕಾರಿ ಕ್ಷಣಗಳಿಗೆ ಮೂಕಪ್ರೇಕ್ಷಕರಾಗದೆ ನನ್ನ ಪಾಲು ಕೂಡ ಇರಲಿ ಎಂದು ಇಚ್ಛಿಸುವಲ್ಲಿ ನಾನು ಕೂಡ ಒಬ್ಬ.


ಇಷ್ಟೆಲ್ಲಾ ಸಂತೋಷ,ಸಂಭ್ರಮದ ಕ್ಷಣಗಳ ನಡುವೆ ಬದುಕಿನ ಮತ್ತೊಂದು ಮಗ್ಗುಲಿನಲ್ಲಿ ಗುಪ್ತಾಗಿ ಅಡಗಿರುವ ಭಯ,ಆತಂಕದ ಕರಾಳ ಛಾಯೆಯ ದಿಗ್ದರ್ಶನ ಎಲ್ಲರಿಗೂ ಬೇಡವಾದದ್ದು, ಬೇಡವೆಂದು ಕೈ ಮುಗಿದು ಕೇಳಿಕೊಂಡರು ಬರದೇ ಇರುವುದಕ್ಕೆ ಅದೇನು ಮಾನವ ಪ್ರೇರಿತವೆ??

ಹೀಗೆ ನೀವು ಹಲವು ಬಾರಿ ಕೊಲೆ,ದರೋಡೆ ,ಆತ್ಮಹತ್ಯೆ , ಭಯೋತ್ಪಾದಕ ದುಷ್ಕೃತ್ಯಗಳ ಕುರಿತ ವಿಸ್ತೃತ ವರದಿಗಳನ್ನು ಟಿ.ವಿ ಯಲ್ಲಿ ವೀಕ್ಷಿಸಿರುತ್ತೀರಿ,ಸಾವಿಗೆ ಶರಣಾದ ಜೀವಗಳ ಬಗ್ಗೆ ಸಂತಾಪ ಮಾತುಗಳು ,ಅನುಕಂಪದ ನಿಟ್ಟುಸಿರು ಬಿಟ್ಟು ಸ್ಪಂದಿಸಿರುತ್ತೀರಿ, ಆದರೆ ಈಗ ನಿಮ್ಮನ್ನು ನೀವು ಆ ಜಾಗದಲ್ಲಿ ಕಲ್ಪಿಸಿಕೊಳ್ಳುವುದಿಲ್ಲ , ರಿಮೋಟ್ ಗುಂಡಿಯನ್ನು ಒತ್ತಿ ಬೇರೆ ಚಾನಲ್ ಗೆ ಹೋಗುವುದರ ಮೂಲಕ ಆ ವಿಷಯಕ್ಕೆ ಅಲ್ಲಿ ಇತಿಶ್ರೀ ಹಾಡಲಾಗುತ್ತದೆ ,ಮನಸ್ಸೆಂಬ ಮರ್ಕಟ ಇಲ್ಲಿ ಬೆರಳ ತುದಿಯಿಂದ ಬೇರೆ ಜಗತ್ತಿಗೆ ತಮ್ಮ ಮನಸ್ಸನ್ನು ಕೊಂಡೊಯ್ಯುತ್ತದೆ...""Life is very easy"" ಅಂತ ಅನ್ನಿಸೋದು ಆ ಕ್ಷಣದಲ್ಲಿ ಮಾತ್ರ.
ಈಗ ಸ್ವಲ್ಪ ಹಿಂದಕ್ಕೆ ಹೋಗೋಣ ,ಟಿವಿಯಲ್ಲಿ ಕಂಡ ಬಲಿಪಶುಗಳು ತಮ್ಮ ಸಾವು ಹತ್ತಿರ ಬಂದ ಸಮಯದಲ್ಲಿ ಕಂಡ ಕ್ಷಣವನ್ನು ನೀವು ಯಾವ ಸಮಯದಲ್ಲಾದರೂ ಊಹಿಸಿದ್ದೀರಾ...ಅವರ ಬದಲು ನೀವೆ ಅಲ್ಲಿದ್ದಿದ್ದರೆ ಹೇಗಾಗುತ್ತಿತ್ತು ...ಇದನ್ನು ಕಲ್ಪಿಸಿಕೊಂಡಾಗ ನಿಮಗೆ ಆಗುವ ಅನುಭವ ಅನುಭವಿಸದವರಿಗಿಂತ ಕೊಂಚ ಕಮ್ಮಿ ...ಏಕೆಂದರೆ ನಿಮ್ಮದು ಕಲ್ಪನೆ.....ಇಂತಹ ಚಿತ್ರ ವಿಚಿತ್ರ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಚಿಕ್ಕ ದೊಡ್ಡ ಪಾತ್ರಧಾರಿಯಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಗಮಿಸಿರುತ್ತದೆ,ಕೆಲವು ಹೇಗಿರುತ್ತೆಂದರೆ...
ಇತ್ತೀಚಿಗಷ್ಟೇ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿನ ಬಾಯಿಂದ ತಪ್ಪಿಸಿಕೊಂಡವರಿಗೆ ಇದರ ಅರಿವು ಭಯಾನಕವಾಗಿರುತ್ತದೆ,,,
ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅಥವಾ ಯಾವುದೇ ಅಮಾನುಷ ದಾಳಿಯಲ್ಲಿ ಕೂದಲೆಳೆಯಿಂದ ಬಚಾವಾದ ಅನೇಕರಿಗೆ ಇಂದಿಗೂ ಅದರ ನೆನಪು ಕರಾಳ....
ಬೆಂಕಿ ಹತ್ತಿಕೊಂಡ ಬಹು ಮಹಡಿ ಕಟ್ಟಡದಿಂದ ಜೀವ ಉಳಿಸಿಕೊಳ್ಳಲು ಹಾರಿದ ದುರ್ಧೈವಿಗಳಿಗೆ ಕನಸಿನಲ್ಲೂ ಬೆಂಕಿಯ ಜ್ವಾಲೆ ಮೈ ಸುತ್ತ ಆವರಿಸಿರುತ್ತದೆ....
ರಸ್ತೆ ಅಫಘಾತದಲ್ಲಿ ಮಾರಣಂತಿಕವಾಗಿ ಪೆಟ್ಟು ತಿಂದ ಬಳಿಕವು ಅಸ್ಪತ್ರೆಯಲ್ಲಿ ಜೀವದಾನ ದಕ್ಕಿಸಿಕೊಂಡವರಿಗೆ ಸಾವಿನ ದರ್ಶನ ಅತಿ ಸಮೀಪದ್ದು....
ಈಜಿ ಮೈ ಹಗುರ ಮಾಡಿಕೊಳ್ಳಲೆಂದು ನೀರಿಗೆ ಇಳಿದವ ಅಕಸ್ಮಾತ್ ಸುಳಿಯಲ್ಲಿ ಸಿಲುಕಿ ಬದುಕುಳಿದವನಿಗೆ ಕುಡಿಯುವ ನೀರಿನಲ್ಲಿ ಕೂಡ ಸಾವಿನ ಪ್ರತಿಬಿಂಬ ಗೋಚರಿಸುವುದು....

ಹುಟ್ಟು ಕೇವಲ ಒಂದೇ ರೀತಿ,ಸಾವು ವಿಧ ವಿವಿಧ ..ಇದು ನಿರಾಶಾವಾದ ಎಂದು ತಿಳಿದುಕೊಳ್ಳಬೇಡಿ...ಆಶಾವಾದದ ಸುಪ್ತ ಜೀವಾಳದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹುದುಗಿರುವ ಚಿಕ್ಕ ವಿಚಿತ್ರ ಕುತೂಹಲ ಎಂದರೆ ತಪ್ಪಾಗಲಾರದು..ಕುತೂಹಲಕ್ಕೆ ಮನಸ್ಸನ್ನು ಪರಿಚಯ ಮಾಡಿಕೊಡಿ, ಎಂದಾದರು ಒಂದು ದಿನ ನಿಮ್ಮನ್ನು ನೀವು ಮೇಲಿನ ಯಾವುದಾದರೂ ಒಂದು ಪಾತ್ರಧಾರಿಯಾಗಿ ಊಹಿಸಿಕೊಳ್ಳಿ ಆಗ ಬದುಕಿನ ತೀವ್ರತೆಗೆ ಮತ್ತೊಂದು ಆಯಾಮ ಸಿಗುವುದು ಖಚಿತ,ಜೀವನದ ಬೆಲೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ...ದೇಹ ನೆಪ ಮಾತ್ರ..ಚೈತನ್ಯ ಭರಿತ ಜೀವನವನ್ನು ಆರಾಧಿಸಿ, ಆದರಿಸಿ, ಆಲಂಗಿಸಿ,ಆಸ್ವಾಧಿಸಿ,.....

Wednesday, May 26, 2010

ಸುದ್ದಿ ಕದ್ದು...!!



ಸು
ದ್ದಿ--> ನ್ಯೂಯಾರ್ಕ್ ಸ್ಟೇಟ್ ವಿಶ್ವವಿದ್ಯಾಲಯ ಮಾತೆ ಅಮೃತಾನಂದಮಯಿಯವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇಷ್ಟ್ ದಿನ ಎಲ್ಲರೂ ಅಮೃತಾನಂದಮಯಿಯವರನ್ನ "ಅಮ್ಮ" ಎಂದು ಕರೆಯತ್ತಿದ್ದರು...ಇನ್ಮುಂದೆ "ಡಾಕ್ಟ್ರಮ್ಮ" ಅನ್ನೋಕೆ ಶುರು ಹಚ್ಕೋತಾರೆ ಅನ್ಸುತ್ತೆ....