Sunday, August 8, 2010

47ರ ಸ್ವಾತಂತ್ರ್ಯ


"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಮರಳಿ ಬರುತಿದೆ" ಸಾಲುಗಳು ಕೇವಲ ಬೇವು ಬೆಲ್ಲ ಸಂಭ್ರಮದ ಯುಗಾದಿಗಷ್ಟೆ ಅಲ್ಲದೆ ,೬೩ ವರ್ಷಗಳಿಂದ ಆಗಸ್ಟ್ 15ರಂದು ನೂರು ಕೋಟಿಗೂ ಹೆಚ್ಚು ಭಾರತೀಯರಲ್ಲಿ ನಿದ್ರಿಸುತ್ತಿರುವ ದೇಶಪ್ರೇಮವನ್ನು ಬಡಿದೆಬ್ಬಿಸಲು ಸ್ವಾತಂತ್ರ್ಯ ಹಬ್ಬ ಕೂಡ ಮರಳಿ ಮರಳಿ ಬರುತಿದೆ..
ಸರ್ಕಾರಿ ರಜೆ ದಿನವಾದ ಅಂದು ಬೆಳ್ಳಿಗ್ಗೆ 9 ರೊಳಗೆ ಸರ್ಕಾರಿ ಕಛೇರಿಗಳು,ಶಾಲಾ-ಕಾಲೇಜುಗಳುಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಜನ ಗಣ ಮನ ವನ್ನು ಕೋರಸ್ ಜೊತೆಗೂಡಿ ಹಾಡಿ , ಮುಖ್ಯ ಅತಿಥಿಯ ಅತಿ ಮುಖ್ಯ ಮಾತುಗಳನ್ನು ಯಾವಾಗ ಮುಗಿಯುತ್ತದೆಯೊ ಎಂಬ ನಿರೀಕ್ಷೆಯಲ್ಲಿ ಕಾದು,ಕೊನೆಗೆ ಸಿಹಿ ತಿಂದು ಮನೆಗೆ ಮರಳುವುದು ವಾಡಿಕೆ.... ಮನೆ ತಲುಪಿದ ನಂತರ ಕನ್ನಡ ವಾಹಿನಿಯಲ್ಲಿ " ಮುತ್ತಿನ ಹಾರ " ಅಥವಾ ದೂರದರ್ಶನದಲ್ಲಿ " ರೋಜಾ" ಚಲನಚಿತ್ರವನ್ನು ವೀಕ್ಷಿಸಿ ಸಂಜೆ ಮಕ್ಕಳನ್ನು ಕರೆದು ಕೊಂಡು ಪಾನಿಪೂರಿ ಮೇಯ್ದು ಪುನಃ ನಾಳೆ ಕೆಲಸಕ್ಕೆ ಹೋಗಬೇಕಲ್ವ ಮಾರಾಯ ಎಂಬ ಸೋಮಾರಿತನ ಮಿಶ್ರಿತ ನಿರಾಸೆಯೊಂದಿಗೆ ರಾತ್ರಿ ನಿದ್ದೆಗೆ ಜಾರಿದರೆ ಅಂದಿಗೆ ನಮ್ಮ ಸ್ವಾತಂತ್ರ್ಯ ಹಬ್ಬಕ್ಕೆ ತೆರೆ ಬಿದ್ದಂತಾಗುತ್ತದೆ. ಇದರ ಮಧ್ಯೆ ಟಿ.ವಿ , ಫ್ರಿಡ್ಜ್ ಮೇಲೆ ತ್ರಿವರ್ಣದ ಚಿತ್ರಗಳನ್ನು ಅಂಟಿಸಿ, ತಮ್ಮ ವಾಹನಗಳ ಹ್ಯಾಂಡಲ್ ಗೆ ಚಿಕ್ಕ ಧ್ವಜವನ್ನು ಸಿಕ್ಕಿಸಿ ಪಡೆವ ಅನಂದ ಕೆಲವರದ್ದು.


ಹೇಗಿದ್ವಿ- ಹೇಗಾದ್ವಿ ಎಂಬ ಭೂತಾಕಾರದ ಪ್ರಶ್ನೆಗಳಿಗೆ ಉತ್ತರ ಸಿಕ್ಕರೂ ಸಿಗದ ಹಾಗೆ,ಪರಿಹಾರ ಕಂಡರೂ ಕಾಣದ ರೀತಿ ,ವಿಶ್ವಾಸಕ್ಕೆ ದ್ರೋಹ ಬಗೆದು ,ಅಪನಂಬಿಕೆಯನ್ನೇ ನಂಬಿ,ಉಪಕಾರ,ಕೃತಜ್ನತೆಯ ಅರಿವೆ ಇಲ್ಲದೆ,ಕೇವಲ ನಾಲಗೆಯ ಮೇಲೆ ನಿಂತಿರುವ ದೇಶಕ್ಕೆ ಸ್ವಾತಂತ್ರ್ಯದ ೬೩ನೇ ಹುಟ್ಟುಹಬ್ಬ.
ಜಾತಿ,ಮತ,ವರ್ಗ,ವರ್ಣ,ಮೇಲು,ಕೀಳೆಂಬ ಭೇಧವಿಲ್ಲದ ಹಾಗೆ ಆಚರಿಸುವ ಈ ರಾಷ್ಟ್ರೀಯ ಹಬ್ಬದಂದು ಸಮಸ್ತ ಭಾರತೀಯರಿಗೆ ನನ್ನ ಶುಭಾಶಯಗಳು.
1834ರ ಸಮಯ, ಆಂಗ್ಲರು ಆಳುವ ಕಾಲದಲ್ಲಿ ಭಾರತದಲ್ಲಿದ್ದ ಒಬ್ಬ ಆಂಗ್ಲ ಅಧಿಕಾರಿ ಲಾರ್ಡ್ ಥಾಮಸ್ ಬ್ಯಾಬಿಂಗ್ಟನ್ ಮ್ಯಾಕ್ಯುಲೆ ಆಗಿನ ಭವ್ಯ ಭಾರತದ ಬಗ್ಗೆ ಕೆಳಕಂಡ ಮಾತುಗಳನ್ನು ಹೇಳಿದ್ದನು.ಈ ಸಂದರ್ಭದಲ್ಲಿ ಈ ಮಾತುಗಳು ಯಾವ ರೀತಿ ಪಾತ್ರಧಾರಿಯಾಗುವುದೆಂದು ಊಹಿಸಲೂ ತುಸು ಕಷ್ಟ.

""ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದ್ದೇನೆ,ಇಲ್ಲಿ ಒಬ್ಬ ಭಿಕ್ಷುಕನಾಗಲಿ ,ಕಳ್ಳನಾಗಲಿ ನಾನು ಕಂಡಿಲ್ಲ, ಮಾನವೀಯತೆ ಹಾಗೂ ಸಮರ್ಥ ಗುಣಗಳಿಂದ ಕೂಡಿರುವ ಇಷ್ಟು ಸಂಪಧ್ಬರಿತವಾಗಿರುವ ದೇಶವನ್ನು ಕೊಳ್ಳೆ ಹೊಡೆಯುವ ಏಕೈಕ ಮಾರ್ಗವೆಂದರೆ ಅದರ ಬೆನ್ನೆಲುಬಿನಂತಿರುವ ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುರಿಯುವುದು,ಅದಕ್ಕಾಗಿ ನಾವು ಅದರ ಪುರಾತನ ಶಿಕ್ಷಣ ಹಾಗೂ ಸಂಸ್ಕಾರ,ಸಂಸ್ಕೃತಿಯನ್ನು ಬದಲಿಸಿಬೇಕು ,ಆಗ ಭಾರತೀಯರಲ್ಲಿ ತಮ್ಮ ಭಾಷೆಗಿಂತ ವಿದೇಶಿ ಭಾಷೆ ,ಸಂಸ್ಕೃತಿಯೇ ಹೆಚ್ಚು ಉತ್ತಮ ಎನಿಸುವುದು, ನಂತರ ತಮ್ಮ ಭಾಷಾಭಿಮಾನ,ಸಾಂಸ್ಕೃತಿಕ ಮೋಹವನ್ನು ತೊರೆದು ನಮಗೆ ಹೇಗೆ ಬೇಕೂ ಹಾಗೆ ಇರುತ್ತಾರೆ,ಆಗ ಭಾರತ ಸಂಪೂರ್ಣವಾಗಿ ನಮ್ಮ ವಶದಲ್ಲಿರುತ್ತದೆ.""

176 ವರ್ಷಗಳ ಹಿಂದಿನ ಭಾರತ ಇದಾಗಿತ್ತು.... 176 ವರ್ಷಗಳ ನಂತರದ ಭಾರತ ಈಗ ನಮ್ಮ ಕಣ್ಮುಂದಿದೆ....