Sunday, May 30, 2010
ವಿಚಿತ್ರ"ವಾದ"
ಕೆಲವು ವಿಚಾರಗಳು ವ್ಯಕ್ತಿಗತವಾಗಿ ಅನುಭವಿಸಿದಾಗ ಮಾತ್ರ ಅದನ್ನು ಅನುಭವ ಎನ್ನಲು ಸಾಧ್ಯ.ಇಂಗ್ಲೀಷಲ್ಲಿ ಹೇಳುವ ಹಾಗೆ "Experience can only be Experienced".ನಾವು ಯಾವುದಾದರು ವಿಷಯವನ್ನು ಪತ್ರಿಕೆಯಲ್ಲಿ ಓದಿದಾಗ,ವಾರ್ತೆಗಳಲ್ಲಿ ವೀಕ್ಷಿಸಿದಾಗ ಅಥವಾ ಕೇಳಿದಾಗ ಆ ವಿಚಾರದ ಗಾಢತೆಯ ಅರಿವಾಗುವುದು ಬಹಳಷ್ಟು ಕಡಿಮೆ.ಪ್ರತ್ಯಕ್ಷವಾಗಿ ಕಂಡಾಗ ಮಾತ್ರ ಅದರ ಆಳ - ಅಗಲದ ವಿಸ್ತಾರ ಮನದಟ್ಟಾಗುವುದು.
ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಸಮುದ್ರದಾಳದಲ್ಲಿ ಇಳಿದು ಮೀನನ್ನು ನಾಚಿಸುವ ಹಾಗೆ ಈಜುವುದು ,ಬಾನೆತ್ತರದಲ್ಲಿ ಹಾರುತ್ತಿರುವ ಹೆಲಿಕಾಪ್ಟರಿನಿಂದ ಬೆನ್ನಿಗೆ ಪ್ಯಾರಾಚೂಟ್ ಕಟ್ಟಿಕೊಂಡು ಒಂದೇ ಉಸಿರಿಗೆ ಜಿಗಿಯುವುದು,ಕೊರೆಯುವ ಚಳಿಯಲ್ಲಿ ಹಿಮಚ್ಛಾದಿತ ಪರ್ವತವನ್ನೇರಿ ಪ್ರಪಂಚವನ್ನೆ ಗೆದ್ದೆ ಎಂಬ ರೀತಿಯಲ್ಲಿ ಬೀಗುವುದನ್ನು ನೋಡಿದವರಿಗೆ ಆ ಜಾಗದಲ್ಲಿ ನಾನಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸದೆ ಇರಲಾರದು . ಜೀವನದ ಇಂತಹ ಅದಮ್ಯ ಅಪರೂಪವಾದ ರೋಮಾಂಚನಕಾರಿ ಕ್ಷಣಗಳಿಗೆ ಮೂಕಪ್ರೇಕ್ಷಕರಾಗದೆ ನನ್ನ ಪಾಲು ಕೂಡ ಇರಲಿ ಎಂದು ಇಚ್ಛಿಸುವಲ್ಲಿ ನಾನು ಕೂಡ ಒಬ್ಬ.
ಇಷ್ಟೆಲ್ಲಾ ಸಂತೋಷ,ಸಂಭ್ರಮದ ಕ್ಷಣಗಳ ನಡುವೆ ಬದುಕಿನ ಮತ್ತೊಂದು ಮಗ್ಗುಲಿನಲ್ಲಿ ಗುಪ್ತಾಗಿ ಅಡಗಿರುವ ಭಯ,ಆತಂಕದ ಕರಾಳ ಛಾಯೆಯ ದಿಗ್ದರ್ಶನ ಎಲ್ಲರಿಗೂ ಬೇಡವಾದದ್ದು, ಬೇಡವೆಂದು ಕೈ ಮುಗಿದು ಕೇಳಿಕೊಂಡರು ಬರದೇ ಇರುವುದಕ್ಕೆ ಅದೇನು ಮಾನವ ಪ್ರೇರಿತವೆ??
ಹೀಗೆ ನೀವು ಹಲವು ಬಾರಿ ಕೊಲೆ,ದರೋಡೆ ,ಆತ್ಮಹತ್ಯೆ , ಭಯೋತ್ಪಾದಕ ದುಷ್ಕೃತ್ಯಗಳ ಕುರಿತ ವಿಸ್ತೃತ ವರದಿಗಳನ್ನು ಟಿ.ವಿ ಯಲ್ಲಿ ವೀಕ್ಷಿಸಿರುತ್ತೀರಿ,ಸಾವಿಗೆ ಶರಣಾದ ಜೀವಗಳ ಬಗ್ಗೆ ಸಂತಾಪ ಮಾತುಗಳು ,ಅನುಕಂಪದ ನಿಟ್ಟುಸಿರು ಬಿಟ್ಟು ಸ್ಪಂದಿಸಿರುತ್ತೀರಿ, ಆದರೆ ಈಗ ನಿಮ್ಮನ್ನು ನೀವು ಆ ಜಾಗದಲ್ಲಿ ಕಲ್ಪಿಸಿಕೊಳ್ಳುವುದಿಲ್ಲ , ರಿಮೋಟ್ ಗುಂಡಿಯನ್ನು ಒತ್ತಿ ಬೇರೆ ಚಾನಲ್ ಗೆ ಹೋಗುವುದರ ಮೂಲಕ ಆ ವಿಷಯಕ್ಕೆ ಅಲ್ಲಿ ಇತಿಶ್ರೀ ಹಾಡಲಾಗುತ್ತದೆ ,ಮನಸ್ಸೆಂಬ ಮರ್ಕಟ ಇಲ್ಲಿ ಬೆರಳ ತುದಿಯಿಂದ ಬೇರೆ ಜಗತ್ತಿಗೆ ತಮ್ಮ ಮನಸ್ಸನ್ನು ಕೊಂಡೊಯ್ಯುತ್ತದೆ...""Life is very easy"" ಅಂತ ಅನ್ನಿಸೋದು ಆ ಕ್ಷಣದಲ್ಲಿ ಮಾತ್ರ.
ಈಗ ಸ್ವಲ್ಪ ಹಿಂದಕ್ಕೆ ಹೋಗೋಣ ,ಟಿವಿಯಲ್ಲಿ ಕಂಡ ಬಲಿಪಶುಗಳು ತಮ್ಮ ಸಾವು ಹತ್ತಿರ ಬಂದ ಸಮಯದಲ್ಲಿ ಕಂಡ ಕ್ಷಣವನ್ನು ನೀವು ಯಾವ ಸಮಯದಲ್ಲಾದರೂ ಊಹಿಸಿದ್ದೀರಾ...ಅವರ ಬದಲು ನೀವೆ ಅಲ್ಲಿದ್ದಿದ್ದರೆ ಹೇಗಾಗುತ್ತಿತ್ತು ...ಇದನ್ನು ಕಲ್ಪಿಸಿಕೊಂಡಾಗ ನಿಮಗೆ ಆಗುವ ಅನುಭವ ಅನುಭವಿಸದವರಿಗಿಂತ ಕೊಂಚ ಕಮ್ಮಿ ...ಏಕೆಂದರೆ ನಿಮ್ಮದು ಕಲ್ಪನೆ.....ಇಂತಹ ಚಿತ್ರ ವಿಚಿತ್ರ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಚಿಕ್ಕ ದೊಡ್ಡ ಪಾತ್ರಧಾರಿಯಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಗಮಿಸಿರುತ್ತದೆ,ಕೆಲವು ಹೇಗಿರುತ್ತೆಂದರೆ...
ಇತ್ತೀಚಿಗಷ್ಟೇ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿನ ಬಾಯಿಂದ ತಪ್ಪಿಸಿಕೊಂಡವರಿಗೆ ಇದರ ಅರಿವು ಭಯಾನಕವಾಗಿರುತ್ತದೆ,,,
ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅಥವಾ ಯಾವುದೇ ಅಮಾನುಷ ದಾಳಿಯಲ್ಲಿ ಕೂದಲೆಳೆಯಿಂದ ಬಚಾವಾದ ಅನೇಕರಿಗೆ ಇಂದಿಗೂ ಅದರ ನೆನಪು ಕರಾಳ....
ಬೆಂಕಿ ಹತ್ತಿಕೊಂಡ ಬಹು ಮಹಡಿ ಕಟ್ಟಡದಿಂದ ಜೀವ ಉಳಿಸಿಕೊಳ್ಳಲು ಹಾರಿದ ದುರ್ಧೈವಿಗಳಿಗೆ ಕನಸಿನಲ್ಲೂ ಬೆಂಕಿಯ ಜ್ವಾಲೆ ಮೈ ಸುತ್ತ ಆವರಿಸಿರುತ್ತದೆ....
ರಸ್ತೆ ಅಫಘಾತದಲ್ಲಿ ಮಾರಣಂತಿಕವಾಗಿ ಪೆಟ್ಟು ತಿಂದ ಬಳಿಕವು ಅಸ್ಪತ್ರೆಯಲ್ಲಿ ಜೀವದಾನ ದಕ್ಕಿಸಿಕೊಂಡವರಿಗೆ ಸಾವಿನ ದರ್ಶನ ಅತಿ ಸಮೀಪದ್ದು....
ಈಜಿ ಮೈ ಹಗುರ ಮಾಡಿಕೊಳ್ಳಲೆಂದು ನೀರಿಗೆ ಇಳಿದವ ಅಕಸ್ಮಾತ್ ಸುಳಿಯಲ್ಲಿ ಸಿಲುಕಿ ಬದುಕುಳಿದವನಿಗೆ ಕುಡಿಯುವ ನೀರಿನಲ್ಲಿ ಕೂಡ ಸಾವಿನ ಪ್ರತಿಬಿಂಬ ಗೋಚರಿಸುವುದು....
ಹುಟ್ಟು ಕೇವಲ ಒಂದೇ ರೀತಿ,ಸಾವು ವಿಧ ವಿವಿಧ ..ಇದು ನಿರಾಶಾವಾದ ಎಂದು ತಿಳಿದುಕೊಳ್ಳಬೇಡಿ...ಆಶಾವಾದದ ಸುಪ್ತ ಜೀವಾಳದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹುದುಗಿರುವ ಚಿಕ್ಕ ವಿಚಿತ್ರ ಕುತೂಹಲ ಎಂದರೆ ತಪ್ಪಾಗಲಾರದು..ಕುತೂಹಲಕ್ಕೆ ಮನಸ್ಸನ್ನು ಪರಿಚಯ ಮಾಡಿಕೊಡಿ, ಎಂದಾದರು ಒಂದು ದಿನ ನಿಮ್ಮನ್ನು ನೀವು ಮೇಲಿನ ಯಾವುದಾದರೂ ಒಂದು ಪಾತ್ರಧಾರಿಯಾಗಿ ಊಹಿಸಿಕೊಳ್ಳಿ ಆಗ ಬದುಕಿನ ತೀವ್ರತೆಗೆ ಮತ್ತೊಂದು ಆಯಾಮ ಸಿಗುವುದು ಖಚಿತ,ಜೀವನದ ಬೆಲೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ...ದೇಹ ನೆಪ ಮಾತ್ರ..ಚೈತನ್ಯ ಭರಿತ ಜೀವನವನ್ನು ಆರಾಧಿಸಿ, ಆದರಿಸಿ, ಆಲಂಗಿಸಿ,ಆಸ್ವಾಧಿಸಿ,.....
Wednesday, May 26, 2010
ಸುದ್ದಿ ಕದ್ದು...!!
ಸುದ್ದಿ--> ನ್ಯೂಯಾರ್ಕ್ ಸ್ಟೇಟ್ ವಿಶ್ವವಿದ್ಯಾಲಯ ಮಾತೆ ಅಮೃತಾನಂದಮಯಿಯವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇಷ್ಟ್ ದಿನ ಎಲ್ಲರೂ ಅಮೃತಾನಂದಮಯಿಯವರನ್ನ "ಅಮ್ಮ" ಎಂದು ಕರೆಯತ್ತಿದ್ದರು...ಇನ್ಮುಂದೆ "ಡಾಕ್ಟ್ರಮ್ಮ" ಅನ್ನೋಕೆ ಶುರು ಹಚ್ಕೋತಾರೆ ಅನ್ಸುತ್ತೆ....
Tuesday, May 25, 2010
ಸುದ್ದಿ ಕದ್ದು...!! 2
ಸುದ್ದಿ -->
ಟ್ರಿನಿಡಾಡ್ ದೇಶಕ್ಕೆ ಭಾರತೀಯ ಮೂಲದ "" ಕಮಲ "" ಪ್ರಸಾದ್ ನೂತನ ಹಾಗೂ ಮೊದಲ ಮಹಿಳಾ ಪ್ರಧಾನ ಮಂತ್ರಿ.
""""... ಎಲ್ಲೆಲ್ಲೋ "ಕಮಲ" ಅರಳುತ್ತಿದೆ ನಮ್ ದೇಶದಲ್ಲಿ ಇನ್ನು ಮುದುಡಿಕೊಂಡಿದೆಯಲ್ಲಪ್ಪಾ ದೇವ್ರೆ....""ಅಂತ ಯಾರೋ ಬಿಜೆಪಿಯವರು ಮಾತಾಡಿಕೊಂಡರಂತೆ...
Monday, May 24, 2010
ಚೂರ್ ನಗ್ರಿ....!!
ಯಾಕೋ ಏನೋ ಒಂದ್ ಜೋಕ್ ಹೇಳ್ಬೇಕು ಅನ್ನಿಸ್ತಿದೆ....
ನಮ್ ಗುಂಡ ಬೆಂಗಳೂರಲ್ಲಿ ಕೈ ತುಂಬಾ ಸಂಬಳ ಕೊಡೋ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ,,, ಇನ್ನೇನ್ ಕೆಲಸ ಸಿಕ್ಕಿದ್ದು ಆಯ್ತು ಮದುವೆ ಮಾಡಿ ಮುಗಿಸಿಬಿಡೋಣ ಅಂತ ಅವರ ಮನೆಯವರು ಡಿಸೈಡ್ ಮಾಡಿದ್ರು....ಗುಂಡನಿಗೆ ಮದುವೆ ok ಆದ್ರೆ ಸಿಟಿ ಹುಡುಗಿ ಬೇಡ ಹಳ್ಳಿ ಹುಡುಗಿನೇ ಮದ್ವೆ ಆಗ್ತೀನಿ ಅನ್ನೋ ಹಠ ಹಿಡಿದು ಮನೆಯವರನ್ನು ಈ ವಿಚಾರವಾಗಿ ಒಪ್ಪಿಸಿದ.ಹಳ್ಳಿ ಹುಡುಗಿಯರ ಸಹಜ ಸೌಂದರ್ಯ ,ಮುಗ್ಧತೆಗೆ ಗುಂಡ ಫುಲ್ ಫಿದಾ ಅಗ್ಬಿಟ್ಟಿದ್ದ,ಹಾಗು ಹೀಗೂ ಅವನ ಆಸೆಯಂತೆ ಗುಂಡ ಲಕ್ಷಣವಾಗಿರೋ ಹಳ್ಳಿ ಹುಡುಗಿಯನ್ನ ಮದುವೆ ಮಾಡ್ಕೊಂಡ.
ಮದುವೆ ಆಗಿದ್ದ್ ಮಾರನೆ ರಾತ್ರಿ ಪ್ರಸ್ಥಕ್ಕೆ ಟೈಮ್ ಫಿಕ್ಸ್ ಆಗಿತ್ತು... ಆ ದಿನ ಪೂರ್ತಿ ಗುಂಡ ಅವನ ಹೆಂಡ್ತಿಗೆ ಇವತ್ತು ನಮ್ ಹನಿಮೂನು,ಹನಿಮೂನು ಅಂತ ಅವಳಿಗೆ ರೇಗುಸ್ತಾ ಇದ್ದ,ಪಾಪ ಆ ಹುಡುಗಿಗೆ ಅಷ್ಟೊಂದು ಇಂಗ್ಲೀಷ್ ಜ್ನಾನ ಇಲ್ಲದೆ ಇದ್ದ ಕಾರಣ "ಅನಿಮೂನ್ ಅಂದ್ರೇನು ,ಎಂಗಿರುತ್ತೆ ...??" ಅಂತ ಮುಗ್ಧ ರೀತಿಯ ಪ್ರಶ್ನೆಗಳನ್ನ ಗುಂಡನಿಗೆ ಕೇಳ್ತಿದ್ಲು..ಆಗ ಗುಂಡ ರಾತ್ರಿ ಎಲ್ಲಾ ಗೊತ್ತಾಗುತ್ತೆ , ಸ್ವಲ್ಪ ಕಾಯಿ ಅಂತ ಅವಳ ಕೆನ್ನೆ ಚಿವುಟಿ ಹೇಳಿದ್ದ.
ಮೊದಲ ರಾತ್ರಿ ಕ್ಷಣ ಹತ್ತಿರ ಬಂದೇ ಬಿಡ್ತು ...ಹೂ ಮಂಚದ ಮೇಲೆ ಗಂಡ ಹೆಂಡತಿ ಇಬ್ಬರು ಸ್ವರ್ಗದ ಬಾಗಿಲು ತಟ್ಟೋಕೆ ಶುರು ಮಾಡಿದ್ರು,ಎಲ್ಲಾ ಮುಗಿದ ಮೇಲೆ ಗುಂಡ ಅವನ ಹೆಂಡತಿಗೆ "" ಹನಿಮೂನ್ ಅಂದ್ರೆ ಏನು ಅಂತ ಕೇಳಿದೆ ಅಲ್ವಾ...ಇದೇ ಹನಿಮೂನ್...ನಾವಿಷ್ಟು ಹೊತ್ತು ಆಡಿದ ಆಟಕ್ಕೆ ಹನಿಮೂನ್ ಅನ್ನೋದು"" ಅಂದ.ಅದಕ್ಕೆ ಅವನ ಹೆಂಡತಿ ""ಅನಿಮೂನ್ ಅಂದ್ರೆ ಇದೇನಾ ...ಇಂತೋವ್ ಕಬ್ಬಿನ್ ಗದ್ದೇಲಿ ನಮ್ ಗೌಡ್ರು ಮಗ ನನ್ ಜೊತೆ ದಿವ್ಸ ಮಾಡ್ತಿದ್ದ,ಆದ್ರೆ ಆ ಮೂದೇವಿ ಅನಿಮೂನ್ ಅಂತಾ ಹೇಳೇ ಇಲ್ಲಾ ನೋಡು.."" ಅಂತ ನಾಚಿಕೊಂಡು ಹೇಳ್ಬಿಡೋದೇ??
ಪಾಪ ಗುಂಡನ ಗತಿ ಏನಾಗಿರ್ಬೋದು ಅವಾಗ???
Saturday, May 22, 2010
ಬ್ಲ್ಯಾಕ್ ಸಾಟರ್ಡೆ
ಶನಿವಾರದ ಮುಂಜಾನೆಯ ಮುಸುಕಿನಲಿ ಹತ್ತಾರು ಕನಸು ಹೊತ್ತು ಸಾವಿರಾರು ಮೈಲುಗಳ ದೂರದಿಂದ ಹಾರಿದ್ದ ಭಾರತೀಯರಿಗೆ ತಮ್ಮ ಜೀವನದಲ್ಲಿ ಇನ್ನೆಂದು ಬೆಳಕು ಹರಿಯುವುದಿಲ್ಲ ಎಂಬ ಸತ್ಯವನ್ನು ಆ ದೇವರು ಬೆಳಿಗ್ಗೆ 6.30 ತನಕ ಮುಚ್ಚಿಟ್ಟಿದ್ದನು,ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಮೂಲಕ ತಾಯ್ನಾಡಿಗೆ ಸ್ಪರ್ಶಿಸಲಿ ಎಂದೇ ಕಾಯುತ್ತಿದ್ದ ಸಾವು ವಿಮಾನದ ಚಕ್ರದ ರೂಪದಲ್ಲಿ ಯಮಪಾಶ ಬೀಸಿ 158 ಜನರನ್ನು ಸುಟ್ಟು ಕರಕಲಾಗಿಸಿ ಉಳಿಸಿದ್ದು ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ಭಯಾನಕ ಮಾರಣ ಹೋಮ.
ಹುಟ್ಟಿದವನಿಗೆ ಸಾವು ಖಚಿತ ಆದರೆ ಹುಟ್ಟಿದಾಕ್ಷಣ ಸಾವೇ,,,,,,,,,,,ದೇವರು ಇಷ್ಟೊಂದು ಕ್ರೂರಿ ಆದನೇ,,,,,,,??
ಇನ್ನೆಂದೂ ಹೀಗಾಗದಿರಲೆಂದು ಪ್ರಾರ್ಥಿಸೋಣ........ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ....!!
Monday, May 17, 2010
ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ
ಕನಸು ಕಾಣುವುದಕ್ಕು ಪುಣ್ಯ ಮಾಡಿರಬೇಕು,ಅದರಲ್ಲೂ ಓಳ್ಳೇ ಕನಸು ಕಾಣಬೇಕಂದ್ರೆ ಪುಣ್ಯ ಇನ್ನೊಂದೆರಡು ಕೆ.ಜಿ.ಜಾಸ್ತಿನೇ ಮಾಡಿರ್ ಬೇಕು,ಕೆಟ್ ಕನಸು ಕಾಣಬೇಕು ಅಂದ್ರೆ ಪಾಪ ಪುಣ್ಯ ಲೆಕ್ಕಕ್ಕೆ ಬರೋಲ್ಲ...ನಿಮಗೆ ಒಂದ್ ಪ್ರಶ್ನೆಗೂ ಉತ್ತರ ಗೊತ್ತಿಲ್ದೆ ಇರೋ ಕ್ವಶ್ಚನ್ ಪೇಪರ್ ಕೊಟ್ಟಾಗ,ಜೇಬಲ್ಲಿ ಕಾಸ್ ಇಲ್ದಾಗ,ಪ್ರಾಜೆಕ್ಟ್ ಡೆಡ್ ಲೈನ್ ಹತ್ರ ಬಂದಾಗ,ಬಜೆಟ್ಟಲ್ಲಿ ಪೆಟ್ರೋಲ್,ಸಿಗರೇಟು,ಎಣ್ಣೆ ರೇಟ್ ಜಾಸ್ತಿ ಆದಾಗ ಚೂರು ಪಾರು ಕೆಟ್ ಕನಸು ಬೀಳೋದು ಗ್ಯಾರಂಟಿ.ಅಂದ ಹಾಗೆ ನೀವು ಎಲ್ಲಿ ತನಕ ಕನಸು ಕಾಣ್ತೀರಾ, ಸಚಿನ್,ಅಂಬಾನಿ,ಮಲ್ಯ,ಅಮಿತಾಭ್ ಬಚ್ಚನ್ ರೇಂಜ್ ವರೆಗೂ ಕನಸು ಇದ್ದೇ ಇರುತ್ತೆ,ಸಚಿನ್ ತರ ಶೇನ್ ವಾರ್ನ್ ಗೆ ಹಿಗ್ಗುಮುಗ್ಗ ಸಿಕ್ಸ್ ಹೊಡಿಬೇಕು,ಅಂಬಾನಿ ತರ ಕೋಟಿ ಕೋಟಿ ದುಡ್ ಮಾಡ್ ಬೇಕು,ಮಲ್ಯ ತರ ಫುಲ್ ಪಂಕಾಗಿ ಅಕ್ಕ ಪಕ್ಕ ಸೂಪರ್ ಮಾಡೆಲ್ಸ್ ಹಾಕೊಂಡು ಬೆನ್ಝ್ ಕಾರಲ್ಲಿ ಓಡಾಡ್ಕೊಂಡು ಶೋಕಿ ಮಾಡ್ ಬೇಕು,ಅಮಿತಾಭ ತರ ಸ್ಟೈಲಿಶ್ ಆಗಿ ಆಕ್ಟರ್ ಆಗ್ಬೇಕು ಇದೆಲ್ಲಾ ನಾರ್ಮಲ್ ಆಗಿ ಇರೋ ಕನಸುಗಳು....ನಾನ್ ಎಲ್ಲಿವರೆಗೂ ಕನಸು ಕಾಣ್ತೀನಿ ಅಂದ್ರೆ ಬೆಳಿಗ್ಗೆ ಎಚ್ಚರ ಆಗೋವರೆಗೂ ಕನಸು ಕಾಣ್ತೀನಿ....ಅಮೇಲೆ ಎಲ್ಲಾ ಬರೀ ಅಡ್ಜಸ್ಟ್ ಮಾಡ್ಕೋಳೊದೆ....ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರು ಇಲ್ದೆ ಇದ್ದಾಗಿಂದ ಹಿಡ್ದು ರಾತ್ರಿ ಮಲಗಿದ್ದಾಗ ಸೊಳ್ಳೆ ಕಚ್ಚೊತನಕನೂ ಬರೀ ಅಡ್ಜಸ್ಟ್ ಮಾಡ್ಕೋಳೊದೆ ಆಯ್ತು....ಅದರಲ್ಲೂ ಜನ ಹೇಳೋದನ್ನ ಕೇಳಬೇಕು """ಯಾಕ್ರಿ ಅಂಗಾಡ್ತೀರಾ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ"""""....??.....ಇದೊಂದ್ ಮಾತು ನೀವ್ ತುಂಬಾ ಕಡೆ,ಬೇಕಾದಷ್ಟು ಜನರ ಬಾಯಿಂದ,ಬಹಳಷ್ಟು ಸಲ ಕೇಳೇ ಇರ್ತೀರಾ.....ಯಾವದಾದ್ರು ಅಂಗಡಿಲಿ ಏನಾದ್ರು ತಗೊಂಡ್ ಮೇಲೆ ಚಿಲ್ಲರೆಯಾಗಿ ಹಳೆ ನೋಟ್ ಕೊಟ್ರು ಅಂತಿಟ್ಟುಕೊಳ್ಳಿ,ಅವಾಗ ನೀವು "ಈ ನೋಟ್ ಹೋಗೊಲ್ಲ ಬೇರೆದ್ ಇದ್ರೆ ಕೊಡ್ರಿ" ಅಂತಾ ಕೇಳ್ತೀರಾ ಅವಾಗ ಅವನು ಹೇಳ್ತಾನೆ..."ರೀ,ಸ್ವಾಮಿ ಸದ್ಯಕ್ಕೆ ಇದೇ ಇರೋದು,ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ ಏನ್ ನಾನೇನ್ ಇಲ್ಲಿ ಹೊಸ ನೋಟ್ ಪ್ರಿಂಟ್ ಮಾಡೋಲ್ಲ,ಬಸ್ ಕಂಡಕ್ಟರ್ ಗೆ ಕೊಡ್ರಿ ನೆಡೆಯುತ್ತೆ..."....ಸರಿ ಇನ್ನೇನ್ ಮಾಡೋಕೆ ಅಗುತ್ತೆ ಅಂತ ಬಿಎಂಟಿಸಿ ಹತ್ತಿ ಕಂಡಕ್ಟರ್ ಗೆ ಆ ನೋಟ್ ಕೊಟ್ರೆ ಆ ದೊರೆ ನೋಟೇನೊ ತಗೊಬಹುದು ಚಿಲ್ಲರೆ ಮಾತ್ರ ಟಿಕೆಟ್ ಹಿಂದೆ ಬರೆದು ಇಳಿಬೇಕಾದ್ರೆ ಈಸ್ಕೊಳ್ರಿ ಅಂತ ಹೇಳ್ತಾರೆ, ನೀವೇನಾದ್ರು ಜಾಸ್ತಿ ಮಾತಾಡಿದ್ರೆ "ರೀ ನಿಮ್ ಈ ಪುಟ್ಕೋಸಿ ದುಡ್ಡು ತಗೊಂಡು ನಾನೇನ್ ಓಡಿ ಹೋಗಲ್ಲ ,ಚೂರು ಅಡ್ಜಸ್ಟ್ ಮಾಡ್ಕೊಳ್ರಿ ನೀವ್ ಇಳಿಬೇಕಾದ್ರೆ ಕೊಡ್ತೀನಿ " ಅಂತ ಫುಲ್ ಆವಾಜ್....ನಿಮಗೂ ಇದ್ರಿಂದ ತಲೆ ಕೆಟ್ಟು ಒಂದ್ ಚೂರ್ ರಿಲಾಕ್ಸ್ ಆಗೋಣ ಅಂತ ಸಿನಿಮಾಗೆ ಹೋದ್ರೆ ಟಿಕೆಟ್ ಸಿಗದೆ ಬ್ಲಾಕಲ್ಲಿ ಟಿಕೆಟ್ ತಗೋಬೇಕು ...ಅಲ್ಲೂ ಅಡ್ಜಸ್ಟ್ ಮೆಂಟು....ಹಾಳಾಗ್ ಹೋಗ್ಲಿ ಅತ್ಲಾಗೆ ಮನೆಗೆ ಹೋಗೋಣ ಅಂತ ಹೋಗಿ ಟಿ.ವಿ ಹಾಕುದ್ರೆ ನಮ್ ಸಿ.ಎಂ.ಟಿವೀಲಿ ಭಾಷಣ ಮಾಡಬೇಕಾದ್ರೆ "" ವಿದ್ಯುತ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ, ಇನ್ನೆರಡು ವರ್ಷ ಕರ್ನಾಟಕದ ಜನತೆ ಅಡ್ಜಸ್ಟ್ ಮಾಡ್ಕೋಬೇಕು ,ಅಷ್ಟರಲ್ಲಿ ವಿದ್ಯುತ್ಗೆ ಒಂದು ಪರಿಹಾರ ಕೊಡ್ತೀವಿ... "" ಅಂತ ಮಾತು ಮುಗಿಸುವಷ್ಟರಲ್ಲಿ ಕರೆಂಟ್ ಕಟ್...ಈಗ ಮತ್ತೊಂದ್ ಸಲ ಅಡ್ಜಸ್ಟ್ ಮಾಡ್ಕೊಳಿ.
ಈ ಅಡ್ಜಸ್ಟ್ ಆನ್ನೋದು ಬರಿ ಸಾಮಾನ್ಯ ಮನುಷ್ಯರಿಗಷ್ಟೆ ಅಲ್ಲ.....ಇದು ಇನ್ನು ಹೈ ಲೆವಲ್ ಆಗಿ ನಡೆಯುತ್ತೆ....ಕುರ್ಚಿಗೋಸ್ಕರ ನಿನ್ನೆ ಮೊನ್ನೆ ತನಕ ಹಾವು ಮುಂಗುಸಿ ತರ ಕಚ್ಚಾಡ್ತ ಇದ್ದೋರು ಸಮ್ಮಿಶ್ರ ಸರ್ಕಾರ ಅಂತ "ಅಡ್ಜಸ್ಟ್ " ಆಗ್ತಾರೆ, ಎಲೆಕ್ಷನ್ ಟೈಮಲ್ಲಿ ಸೀರೆ,ಸಾರಾಯಿ ಕೊಟ್ಟು ಮತದಾರರು ಫುಲ್ ಅಡ್ಜಸ್ಟ್ ಅಗ್ತಾನೆ ಇರ್ತಾರೆ, ಕಾವೇರಿ ನೀರಿಗಾಗಿ ಕರ್ನಾಟಕ ತಮಿಳುನಾಡು "ಅಡ್ಜಸ್ಟ್ " ಮಾಡ್ಕೋತಾರೆ, ಡೆಲ್ಲಿ ಮತ್ತೆ ಲಾಹೋರ್ ಮಧ್ಯ ಬಸ್ ಬಿಟ್ಟು ಭಾರತ ಪಾಕಿಸ್ತಾನದ ಜೊತೆ "ಅಡ್ಜಸ್ಟ್ "" ಅಗುತ್ತೆ, ಮ್ಯಾಚ್ ಗೆದ್ರು ಸಿಗದೆ ಇರುವಷ್ಟು ಹಣ ಬೆಟ್ಟಿಂಗ್ ಹಣ ತಗೊಂಡು ಕ್ರಿಕೆಟಿಯರ್ಸೆ "ಅಡ್ಜಸ್ಟ್ " ಆಗ್ಬಿಟ್ಟಿರ್ತಾರೆ...,
ಈ ಅಡ್ಜಸ್ಟ್ ಮೆಂಟ್ ಲಿಸ್ಟ್ ಹೇಳ್ತಾ ಹೋದಷ್ಟು ಇನ್ನು ದೊಡ್ಡದಾಗುತ್ತ ಹೋಗುತ್ತೆ...ಒಂದ್ ಕ್ಷಣ ನಾವು ಇದನ್ನು ಬಿಟ್ಟು ಯೋಚನೆ ಮಾಡಿದರೆ ಹೇಗಿರುತ್ತೆ?? ಈ ರೀತಿ ಇರೋದ್ರಿಂದಾನೆ ನಮ್ಮ ಜೀವನ ನಡೆಯುತ್ತಾ ಇದ್ಯಾ,...?? ಇದಕ್ಕಾಗಿ ನಾವು ಹೇಗೆ ಬದಲಾಗಬೇಕು ಅಥವಾ ನಮಗಾಗಿ ನಾವು ಏನನ್ನು ಬದಲಾಯಿಸಬೇಕು....ಪ್ರಶ್ನೆ ..ಪ್ರಶ್ನೆ ಆಗಿಯೇ ಉಳಿಯುತ್ತೆ ,,,,ಏಕೆಂದರೆ ಇದರ ಉತ್ತರ ಪ್ರತಿಯೊಬ್ಬರು ತಾವು ಮಾಡುವ ಕೆಲಸದಲ್ಲಿ ತೋರುವ ಶ್ರದ್ದೆ,ವಹಿಸುವ ಪಾತ್ರ,ಅದರಿಂದ ಅನ್ಯರಿಗೆ ಆಗುವ ಉಪಯೋಗ,ಅನಾನುಕೂಲದಂತಹ ವಿಚಾರಗಳಲ್ಲಿ ಅಡಗಿರುತ್ತದೆ.
ಪ್ರತಿಯೊಬ್ಬರು ದಿನ ಯಾವುದಾದರು ಒಂದ್ ವಿಷ್ಯಕ್ಕೆ ಅಡ್ಜಸ್ಟ್ ಮಾಡ್ಕೊಂತಾನೇ ಇರ್ತೀರಾ...ಕೆಲವು "ಅಡ್ಜಸ್ಟ್ " ಮಾಡ್ಕೊಂಡಿರೊ ವಿಷಯಗಳೇ ಜೀವನದಲ್ಲಿ ನಮಗೆ ಮುಖ್ಯ ಅನ್ಸೋಕೆ ಶುರು ಅಗುತ್ತೆ, ನಮಗೆ ಅರಿವಿಲ್ಲದಂತೆ ನಾವು ಅದನ್ನು ಸಂಪೂರ್ಣ ರೀತೀಲಿ ಒಪ್ಪಿಕೊಂಡಿರುತ್ತೀವಿ ,ಆ ವಿಷಯಗಳು ಸ್ವಲ್ಪ ಕಷ್ಟ ಇದ್ರೂ ಸಹಜವಾಗಿರುತ್ತೆ.ಈ ಅಸಹಜವಾದ ಸಹಜತೆಯ ಬೇರನ್ನು ಹುಡುಕಿಕೊಂಡು ಹೋದಷ್ಟು ಆಳ ನಾವು ಇಲ್ಲಿವರೆಗೂ ಯಾವುದಕ್ಕೆ "ಅಡ್ಜಸ್ಟ್ " ಆಗಿದ್ದೀವೋ ಅವೆಲ್ಲಾ ಎಳೆ ಎಳೆ ಆಗಿ ಇನ್ನೊಂದು ಮತ್ತೊಂದು ಬೇರಿಗೆ ಬೆಸುಗೆ ಹಾಕಿಕೊಂಡು ಬಿಡಿಸಲಾಗದ ಕಗ್ಗಂಟಾಗಿರುತ್ತೆ ,ಸರಿ ಆ ಕಗ್ಗಂಟು ಬಿಡಿಸೋಣ ಅಂತ ಶುರು ಮಾಡೋಕೆ ಅದರ ಕೊನೆ ಯಾವುದು,ತುದಿ ಯಾವುದು ಅಂತ ತಿಳಿಯುವುದಲ್ಲಿಯೇ ಅರ್ಧ ಜೀವನ ಮುಗಿದು ಹೋಗುತ್ತೆ....ಅಷ್ಟೊಂದ್ ಟೈಮ್ ಯಾಕೆ ವೇಸ್ಟ್ ಮಾಡೋದು....ಆ ಕಗ್ಗಂಟು ಬಿಡಿಸೋದೇ ಬೇಡ...ಅದು ಹಾಗೆ ಇರಲಿ..ನಾವು ಹೀಗೆ ಇರೋಣ ...."ಸ್ವಲ್ಪ ಅಡ್ಜಸ್ಟ್ " ಮಾಡ್ಕೊಂಡ್ ಇದ್ರೆ ಆಯ್ತು ಎನ್ನುವ ನಮ್ಮ ಬದುಕಿನ ಧ್ಯೇಯ ವಾಕ್ಯವನ್ನ ಪಾಲಿಸಿಕೊಂಡು ಹೋಗುವರಲ್ಲಿ ನಾವು ನೀವು ಎಲ್ಲರೂ ಇದ್ದೀವಿ.
Thursday, May 13, 2010
ವೋಟ್ ಫಾರ್ ??
ಇದು ಮೇ 13ರ ಕನ್ನಡ ಪ್ರಭ ಪತ್ರಿಕೆಯಲ್ಲಿ ಫ್ರಂಟ್ ಪೇಜಲ್ಲಿ ಪ್ರಕಟವಾಗಿರೋದು...
ಈಗಷ್ಟೆ ಕೊನೆಗೊಂಡ ಗ್ರಾಮ ಪಂಚಾಯ್ತಿ ಚುನಾವಣೆಲಿ ಸರಾಸರಿ ಮತದಾನ 80%....ಇದುಕ್ಕೆ ಮುಂಚೆ "ಸಿಲಿಕಾನ್ ವ್ಯಾಲಿ","ಐಟಿ ಸಿಟಿ"," ಪಬ್ ಸಿಟಿ" ಅಂತೆಲ್ಲಾ ಹಸ್ರಿರೋ ನಮ್ ಬೆಂಗ್ಳೂರಲ್ಲಿ ಕೂಡ ಬಿಬಿಎಂಪಿ ಎಲೆಕ್ಷನ್ ಆಗಿದ್ದು ನೀವೇ ನೋಡಿದ್ದೀರಾ....ಆ ಎಲೆಕ್ಷನಲ್ಲಿ ವೋಟಿಂಗ್ ಆಗಿದ್ದು ಕೇವಲ 44%....ದಿನ ಬೆಳಗಾದ್ರೆ ಬೆಂಗಳೂರಿನ ಸೋ ಕಾಲ್ಡ್ "ಎಜುಕೇಟೆಡ್ ಸಿಟಿಜನ್ಸ್" ಸರಕಾರಕ್ಕೆ ಬಯ್ತಾನೆ ಇರ್ತಾರೆ,ರೋಡ್ ಸರಿಯಿಲ್ಲ,ಬೀದಿ ದೀಪ ಇಲ್ಲ,ನಮ್ ಏರಿಯಾಗೆ ಒಂದ್ ಬಸ್ ಕೂಡ ಬರೋಲ್ಲ,ಟ್ರಾಫಿಕ್ ಎಷ್ಟಿದೆ ಅಂದ್ರೆ ಅರ್ಧ ಜೀವನ ಟ್ರಾಫಿಕ್ ಸಿಗ್ನಲ್ ನಲ್ಲೆ ಕಳೆದು ಹೋಗ್ತಾ ಇದೆ,ಇರೋ ಬರ ಮರ ಎಲ್ಲಾ ಕಡಿತಾ ಇದ್ದಾರೆ ,ಇದ್ರಿಂದ ಬಿಸಿಲು ಜಾಸ್ತಿ ಆಗಿದೆ,ಮಳೆ ಬಂದ್ರೆ ರಸ್ತೆ ಮೇಲೆ ಮೊರ್ನಾಲ್ಕು ದಿನ ಒಂದ್ ಮಿನಿ ಕೆರೆನೆ ಸೃಷ್ಠಿಯಾಗಿರುತ್ತೆ .... oh!! this govt sucks.....is the corporation sleeping ....what's wrong with this country?? ಅಂತ ಇಂಗ್ಲೀಷಲ್ಲಿ ಶಾಪ ಹಾಕೋ ಜನ ವೋಟಿಂಗ್ ದಿನ ಮಾತ್ರ ಪಬ್,ಸಿನಿಮಾ,ಮಾಲ್,ಪಿಕ್ನಿಕ್,ಲಾಂಗ್ ಡ್ರೈವ್,ಮಣ್ಣು ಮಸಿ ಅಂತ ಓಡಿ ಹೋಗ್ತಾರೆ,ಮನೆ ಹತ್ರನೇ ಇರೋ ಪೋಲಿಂಗ್ ಬೂತ್ ಕಡೆ ತಲೆ ಕೂಡ ಹಾಕಿ ಮಲಗೋಲ್ಲ...
ಅದೇ ಹಳ್ಳಿಯೊರ್ ನೋಡಿ ಕಲಿರಿ,,,, 80% ವೋಟಿಂಗ್ ಅಂದ್ರೆ ಏನ್ ತಮಾಷೆನ ಗುರು....ಈ ರಿಸಲ್ಟ್ ಸಾಕು ಸಿಟಿಲಿ ವೋಟ್ ಹಾಕ್ದೇ ಇರೋ ""ಎಜುಕೇಟೆಡ್ ಸಿಟಿಜನ್ಸ್"" ತಮ್ಮ ದೇಶದ ಬಗ್ಗೆ ಯಾವ್ ರೀತಿ ಕಾಳಜಿ ವಹಿಸುತ್ತಾರೆ ಅಂತ....ಈಗಲಾದ್ರು ಬೆಂಗಳೂರ್ ಜನ ಎಲೆಕ್ಷನ್ ದಿನ ಒಂದ್ ಅರ್ಧ ಘಂಟೆ ವೋಟ್ ಮಾಡೊಕೆ ವ್ಯಯಿಸಿದರೆ ಒಳ್ಳೇ ಸರಕಾರದ ಮೊಲಕ ತಮಗೆ ಒಳ್ಳೇದು ಆಗೋದು ಅನ್ನೋದು ಅರಿವಾಗಲಿ.
Wednesday, May 12, 2010
ಯಡ್ಡಿ ಇನ್ ಬ್ಲೂ
ನೀವೊಂದ್ ಕೆಲ್ಸಾ ಮಾಡಿ.....
ಸೀನ್ 1: ಒಬ್ಬ ಅಡ್ರಸ್ ಕೇಳ್ತಾ ಇರೋದು
.
ಸಾರ್,ಈ 12th ಕ್ರಾಸ್ ಯಾವಕಡೇ ಬರುತ್ತೆ,...
ಮತ್ತೆ ""ನೀವೊಂದ್ ಕೆಲ್ಸಾ ಮಾಡಿ""...ಹೀಗೆ ಸೀದಾ ಹೋಗಿ ಲೆಫ್ಟ್ ತಗಳಿ,ಅಮೇಲೆ ಪಾನಿ ಪೂರಿ ಅಂಗ್ಡಿಯಿಂದ ರೈಟ್ ತಗಂಡ್ರೆ ಅಲ್ಲಿಂದ ಮೊರನೇ ರೋಡೆ 12th ಕ್ರಾಸು...
ಸೀನ್ 2: ಇಬ್ರು ಹೆಂಗಸರು ಅವರ ಫೇವರೆಟ್ ಒಡವೆಗಳ ಬಗ್ಗೆ ಮಾತಾಡ್ತಿದಾರೆ.
ಅಲ್ಲಾರಿ ,ಹೋದ್ ವಾರ ಇನ್ನು ಈ ಸರನ ಪಾಲಿಷ್ ಮಾಡುಸ್ಕೊಂಡ್ ಬಂದಿದ್ದೆ ,ಅಷ್ಟ ಬೇಗ ಶೈನಿಂಗೇ ಹೋಗಿದೆ ನೋಡ್ರಿ...30 ರೂಪಾಯ್ ಇಸ್ಕೊಂಡಿದ್ದ ಆ ಆಚಾರಿ...
ನೀವೊಬ್ರು ಹೋಗಿ ಹೋಗಿ 30 ರೂಪಾಯ್ ಕೊಟ್ಟಿದೀರಲ್ಲಾ..ಒಂದ್ ಕೆಲ್ಸಾ ಮಾಡಿ....ತಲೆಗೆ ಹಾಕೋ ಶಾಂಪೂ ಇರುತ್ತಲ್ವ..ಅದನ್ನ ನೀರಲ್ಲಿ ಚೆನ್ನಾಗಿ ನೊರೆ ಬರೋತನದ ಕದಡಿ ಸರನ ಒಂದ್ 2 ಘಂಟೆ ನೆನಸುದ್ರೆ ಸಾಕು...ಹೊಸ ಸರದ್ ತರ ಶೈನಿಂಗ್ ಬರುತ್ತೆ...
ಸೀನ್ 3 : ಇಬ್ರು ಹುಡುಗ್ರು ಮಾತಾಡ್ತಿರೋದು...
ಲೋ ಮಗಾ.....ನನ್ ಹತ್ರ ಬರೀ 8 ರೂಪಾಯ್ ಇದ್ಯೊ...ಎರ್ಡ್ ಕಿಂಗ್ ಬೇಕು ಅಂದ್ರೆ ಇನ್ನ 2 ರೂಪಾಯ್ ಬೇಕು...
ಒಂದ್ ಕೆಲ್ಸಾ ಮಾಡ್ ಸಿಸ್ಯಾ...5 ರೂಪಾಯ್ಗೆ ಒಂದ್ ಕಿಂಗ್ ತಗೋ...ಮಿಕ್ಕಿದ್ 3 ರೂಪಾಯ್ಗೆ ಬೈಟು ಟೀ ಹೊಡ್ಯಣ....
ಈ ತರದ್ ಸೀನ್ ನಿಮ್ ಲೈಫಲ್ಲಿ ದಿನ ನಿತ್ಯ ನಡಿತಾಯಿರುತ್ತೆ.....ದಮ್ ಹೊಡ್ಯೋದು,ಚಿನ್ನದ್ ಸರ ಪಾಲಿಷ್ ಮಾಡ್ಸೋದೆಲ್ಲಾ ನೆಡೆಯದೆ ಇರ್ಬೋದು ಆದ್ರೆ ನೀವ್ ಅಡ್ರಸ್ ಕೇಳೋದು ಅಥವಾ ಬೇರೆಯವರು ನಿಮಗೆ ಅಡ್ರಸ್ ಕೇಳೋದಂತು ಕಾಮನ್...ನಾನೀಗ ಹೇಳ್ತಾ ಇರೋ ಮ್ಯಾಟ್ರೆ ಬೇರೆ....ಜನ ಏನಾದ್ರು ಮಾತಾಡೊಕ್ ಮುಂಚೆ ""ನೀವೊಂದ್ ಕೆಲ್ಸಾ ಮಾಡಿ"" ಅನ್ನೋದನ್ನ ಫಸ್ಟ್ ಹೇಳೋದು ಮರೆಯೊಲ್ಲ..ಮಾತು ಶುರು ಹಚ್ಕೋಳೋದೇ "ನೀವೊಂದ್ ಕೆಲ್ಸಾ ಮಾಡಿ" ಯಿಂದ..ಕನ್ನಡ ಭಾಷೆಗಳಲ್ಲೇ ಹೆಚ್ಚು ಉಪಯೋಗಿಸುವ ತುಂಡು ವಾಕ್ಯ ಅಂದ್ರೆ ತಪ್ಪಾಗಲ್ಲ,,,ಯಾಕೆ ಅವ್ರೇನಾದ್ರು ಆ ತರ ಹೇಳಿಲ್ಲ ಅಂದ್ರೆ ನಾವ್ ಆ ಕೆಲ್ಸ ಮಾಡೋಲ್ವ...ಅಥವಾ ಅವ್ರು ಹೇಳ್ತಿದ್ದಾರೆ ಅಂತಾನೆ ನಾವ್ ಮಾಡ್ತೀವಾ...ಆ ತರ ಹೇಳೊದ್ರಲ್ಲಿ ಏನು ತಪ್ಪಿಲ್ಲ ಆದ್ರೆ ಈ ರೀತಿ ಮಾತಿನ ಧಾಟಿ ಹೇಗೆ ಶುರು ಹಚ್ಕೊಂತು ಅನ್ನೋದೆ ಸ್ವಲ್ಪ ತಲೆ ಕೆಡ್ಸುತ್ತೆ....ನೀವೇನಾದ್ರು ಹಳೆ ಕನ್ನಡ ಸಿನಿಮಾ ನೋಡಿದ್ರೆ ಅದ್ರಲ್ಲಿ ಈ ರೀತಿ ಡೈಲಾಗ್ ಸಿಗೋದೆ ಕಷ್ಟ...ಇತ್ತೀಚಿನ ಸಿನಿಮಾಗಳಲ್ಲಿ ಅಟ್ ಲೀಸ್ಟ್ ಒಂದ್ 5-6 ಸಲನಾದ್ರು ನಿಮಗೆ ಕೇಳ್ಸೋದು ಸತ್ಯ....ನಾವೇನ್ ಕೆಲ್ಸಾ ಮಾಡ್ತೀವೊ ಬಿಡ್ತೀವೊ ಆದ್ರೆ ಬೇರೆಯವ್ರಿಗೆ ಕೆಲ್ಸಾ ಮಾಡಿ ಅಂತ ಮಾತ್ರ ಚೆನ್ನಾಗಿ ಮರೀದೆ ಹೇಳ್ತೀವಿ.....
ಯಾವುದೇ ಭಾಷೆ ಆಗ್ಲಿ ...ಅದಕ್ಕೆ ಅದರದೇ ಆದ ಸ್ಟೈಲ್ ಇದ್ದೇ ಇರುತ್ತೆ...ಅದು ಜನರಿಂದ ಜನರಿಗೆ, ಊರಿಂದ ಊರಿಗೆ ಬೇರೆ ಬೇರೆ ರೀತಿ ಬದಲಾವಣೆ ಅಗ್ತಾ ಆಗ್ತಾ ಈ ತರಹದ ನುಡಿ ಮುತ್ತುಗಳು ಹುಟ್ಟಿಕೊಳ್ಳುತ್ತೆ....ಇದೊಂದೇ ಅಲ್ಲಾ ಈ ರೀತಿ ನಮ್ಮಲ್ಲಿ ಇನ್ನು ಬೇಜಾನ್ ಇದೆ..ಆದ್ರೆ ಇದು ಮಾತ್ರ ಸೂಪರ್ ಫೇಮಸ್.....
ಅಂದ ಹಾಗೆ "ನೀವೊಂದ್ ಕೆಲ್ಸಾ ಮಾಡಿ".....ಇದನ್ ಓದುದ್ ಮೇಲೆ ನಿಮಗೆ ಏನ್ ಅನ್ನುಸ್ತು ಅಂತ ಒಂದ್ "ಕಮೆಂಟ್" ಹಾಕ್ತೀರಾ ....??
Tuesday, May 11, 2010
ಪ್ರೀತಿಗೆ ಬರೀ ಎರಡೇ ಪಾರ್ಟ್ಸ ??
ಪ್ರೇಮಿ 1: ಪ್ಲೀಸ್...ಪ್ಲೀಸ್ ಬೇಡ ಅನ್ಬೇಡ ...ನನ್ನ ಪ್ರೀತಿನ ದೂರ ತಳ್ ಬೇಡ,ಇದು ಅಂತಿಂತ ಮಾಮೊಲಿ ಪ್ರೀತಿ ಅಲ್ಲ..... ಹೃದಯದಿಂದ ಶುರುವಾಗಿರೋ ಪ್ರೀತಿ ...!!
ಪ್ರೇಮಿ 2 : ನನ್ ಮನಸಲ್ಲಿ ಬರೀ ನೀನೇ ತುಂಬ್ಕೊಂಡಿದ್ದೀಯ....ನಿನ್ನ ನೋಡ್ದಾಗಿಂದ ಕಣ್ಣಿಗೆ ನಿದ್ದೆ ಇಲ್ಲ,,,,ನೀನೇನಾದ್ರು ನನ್ನ ಲವ್ ಮಾಡೋಲ್ಲ ಅಂದರೆ ನನ್ ಮನಸ್ಸು ಒಡ್ದು ಚೂರ್ ಚೂರ್ ಅಗ್ಬಿಡುತ್ತೆ...
ಪ್ರೇಮಿ 3: ನೋಡು ನೀನಂದ್ರೆ ನನಗೆ ಇಷ್ಟ ....ನಿನ್ಗೆ ನನ್ ಮನಸ್ಸು ಕೊಟ್ಟಾಗಿದೆ...ಆ ಮನಸ್ಸನ್ನಾ ಜೋಪಾನವಾಗಿ ನೋಡ್ಕೋ...
ಪ್ರೇಮಿ 4 : ನಿನ್ ಬಿಟ್ಟು ನನ್ ಮನಸ್ನಲ್ಲಿ ಬೇರೆ ಯಾರಿಗೂ ಜಾಗ ಇಲ್ಲ.... ನನ್ ಕಣ್ಣಲ್ಲಿ ಕಣ್ ಇಟ್ಟು ಹೇಳು ನಾನಂದ್ರೆ ನಿನ್ಗೆ ಇಷ್ಟ ಇಲ್ವಾ,,,??
ಇವೆಲ್ಲಾ ಫಿಲ್ಮಿ ಡೈಲಾಗ್ ಗಳು ....ಕನ್ನಡ ಫಿಲ್ಮ್ ಅಂತಾನೇ ಅಲ್ಲ...ಯಾವ್ದೇ ಭಾಷೆ ಫಿಲ್ಮ್ ತಗೋಳಿ ಅದು ಹೆಚ್ಚು ಕಮ್ಮಿ ಹೀಗೆ ಇರುತ್ತೆ........ಇಲ್ಲಿರೋ ಡೈಲಾಗ್ ಗಳಲ್ಲಿ ಕಾಮನ್ ಏನಿದೇ ಹೇಳಿ....ಅದೇ "ಮನಸ್ಸು " ಮತ್ತೆ "ಕಣ್ಣು".....ತತ್ತೆರಿಕೆ....!!
ಬಾಡೀಲಿ ಅಷ್ಟೊಂದು ಪಾರ್ಟ್ಸ್ ಇದೆ ....ಅದೆಲ್ಲಾ ಬಿಟ್ಟು ಬರಿ ಕಣ್ಣು ,ಮನಸ್ಸು ಅಂತಾನೆ ಇರ್ತಾರೆ....ಯಾಕೆ ಬೇರೆ ಏನು ಸಿಗ್ಲೇ ಇಲ್ವ......
ಸರಿ... ಹಾಳಾಗ್ ಹೋಗ್ಲಿ ... ಡೈಲಾಗ್ ಬೇಡ...ಸಿನಿಮಾ ಹಾಡ್ ಕೇಳಿ ...ಅದು ಕೂಡಾ ಸೇಮ್ ಸ್ಟೋರಿ...
""ಕಣ್ಣಲ್ಲು ನೀನೇನೆ....ಕಂಡಲ್ಲು ನೀನೇನೆ ....ನನ್ನಲ್ಲು ನೀನೇ ಕಾಣುವೆ ..""
""ಈ ನಿನ್ನ ಕಣ್ಣಾಣೆ ....ಈ ನಿನ್ನ ಮನದಾಣೇ.....""
""ನೂರು ಕಣ್ಣು ಸಾಲದು .....ನೂರು ಕಣ್ಣು ಸಾಲದು ನಿನ್ನ ನೋಡಲು ....""
""ಸೂರ್ಯ ಕಣ್ಣು ಹೊಡ್ದ....ಕೈಲಿ ರೋಜ ಹಿಡ್ದ...ಹೆಸ್ರು ಏನೇ ಅಂದ...""
""ನಿನದೆ ನೆನಪು ದಿನವು ಮನದಲ್ಲಿ ನೋಡುವ ಆಸೆಯು ತುಂಬಿದೆ ನನ್ನಲಿ....ನನ್ನಲಿ....ನನ್ನಲಿ...""
ಇದು ಬರಿ ಸ್ಯಾಂಪಲ್ ಗುರು.....ಹುಡುಕ್ತಾ ಹೋದ್ರೆ ಇಂತಾ ಹಾಡ್ಗಳು ಬೇಜಾನ್ ಇದೆ....ಕಣ್ಣು ಮನಸ್ಸು ಎರಡಿದ್ರೆ ಲವ್ ಅಂಗೆ ಉಕ್ಕಿ ಉಕ್ಕಿ ಬರುತ್ತಾ.....ಮಾತಾಡೊ ಬಾಯಿ...ನೀವ್ ಮಾತಾಡ್ಲಿಲ್ಲ ಅಂದ್ರೆ ಎಂಗ್ ಹೇಳ್ತೀರಾ .....ಕಿವಿ ಇಲ್ಲ ಅಂದ್ರೆ ಅವಳು/ಅವನು ಹೇಳೋದು ಎಂಗ್ ಕೇಳುಸ್ಕೊತೀರಾ...ಕೈ ಕೈ ಹಿಡ್ಕೊಂಡ್ ಪಾರ್ಕ್ ನಲ್ಲಿ ಸುತ್ತಾಡಬೇಕಾದ್ರೆ ಮಾತ್ರ ಕೈ ಬೇಕು....ಅಪ್ಪ ಅಮ್ಮ ಮದ್ವೆ ಸಾಧ್ಯ ಇಲ್ಲ ಅಂದಾಗ ಮನೆಯಿಂದ ರೈಟ್ ಹೇಳೋಕೆ "" ಕಾಲ್ "" ಇಸ್ ವೆರಿ ವೆರಿ ಇಂಪಾರ್ಟೆಂಟ್,.....ಮದ್ವೆ ಆದ್ ಮೇಲೆ ..ಅಥವಾ ಅಕಸ್ಮಾತ್ ಮದ್ವೆ ಗಿಂತ ಮುಂಚೇನೆ "ಡುಮ್ ಟಕಾ" ಆದಾಗ ಅದು ಬೇಕು...."ಅದು " ಅಂದ್ರೆ ಎಲ್ಲಾ ಬಾಯ್ ಬಿಟ್ಟು ಹೇಳೋಕೆ ಅಗೋಲ್ಲ,,,ಅರ್ಥ ಮಾಡ್ಕೊಳ್ರಿ....ಏನ್ ಇನ್ನ ಎಳೆ ಮಕ್ಳಲ್ಲ ನೀವು....!!
ದೇವರಿಗಿಂತ ಕಲಾವಿದ್ರು ಬೇಕೇನ್ರಿ....ನಮ್ ದೇಹನಾ ಎಷ್ಟ್ ಪಸಂದಾಗಿ ಡಿಸೈನ್ ಮಾಡಿದಾನೆ ,ತರ ತರಹದ ಬೇಜಾನ್ ಪಾರ್ಟ್ಸ್ ಅವಾಗವಾಗ ವರ್ಕಿಂಗ್ ಕಂಡೀಷನಲ್ಲಿ ಇರುತ್ತೆ ...ಅದೆಲ್ಲಾ ಬಿಟ್ಟು ಬರಿ ಕಣ್ಣು ,ಮನಸ್ಸು ಇವೆರಡನ್ನೇ ಹಿಡ್ಕೊಂಡ್ ಕೂತ್ರೆ ಅನ್ಯಾಯ ತಾನೆ....
ನಂಗೊಂತು ಇದುವರೆಗೂ ಕಣ್ಣು ಮನಸ್ಸಿಂದ "ಡೌ" ಏನು ಶುರು ಆಗಿಲ್ಲ....ಆ ರೀತಿ ಆಗಿದ್ರೆ ಮ್ಯಾಟ್ರು ಬೇರೆನೆ ಅಗ್ತಿತ್ತು ಬಿಡಿ...ಸರಿ ಈಗ್ಯಾಕ್ ಆ ಮಾತು....ಇನ್ನಾದ್ರು ಕಣ್ಣು ಮತ್ತೆ ಆ ಮನಸ್ಸು ಬಿಟ್ಟು ಮಿಕ್ಕಿರೋದ್ರ ಬಗ್ಗೆ ಚಿಂತೆ ಮಾಡಿ...ಆದ್ರು ಒಂದಂತು ನಿಜ....ಬರಿ ಕಣ್ಣು ,ಮನಸ್ಸು ಅಂದಂದೇ ಈಗ 110 ಕೋಟಿ ಇದೀವಿ....ಆ ಜಾಗಕ್ಕೆ ಬೇರೆ ಪದಗಳು ಬಂದ್ರೆ....ಮನೆ ಮನೆಗೊಂದ್ ಕ್ರಿಕೆಟ್ ಟೀಮ್,ಬೀದಿ ಬೀದಿಗೊಂದು ಇಸ್ಕೂಲು,ಕಾಲೇಜ್ ಕಟ್ಟಿಸಬೇಕಾಗ್ಬೋದು....
ನಮ್ ಪ್ರೇಮ ಕವಿ ಕಲ್ಯಾಣ್ ಬರೆದೆರೋ ಈ ಹಾಡಿನ ಪಲ್ಲವಿ ಕೇಳಿ....ಒಂದ್ ಜನ್ಮಕ್ಕೆ ಆಗುವಷ್ಟು ಮನಸ್ಸು ಇದರಲ್ಲಿ ಇದೆ....
ಮನಸೇ ಓ ಮನಸೇ ಎಂತಾ ಮನಸೇ............ಮನಸೇ ..ಎಳೆ ಮನಸೇ...
ಮನಸೇ ಓ ಮನಸೇ ಎಂತಾ ಮನಸೇ............ಮನಸೇ ..ಒಳ ಮನಸೇ...
ಮನಸೆ ನಿನ್ನಲಿ ಯಾವ ಮನಸಿದೆ....ಯಾವ ಮನಸಿಗೆ ನೀ ಮನಸು ಮಾಡಿದೆ...
ಮನಸಿಲ್ಲದ ಮನಸ್ಸಿನಿಂದ ಮನಸು ಮಾಡಿ ಮಧುರ ಮನಸಿಗೇ ....ಮನಸು ಕೊಟ್ಟೋ ಮನಸನ್ನೇ ಮರೆತುಬಿಟ್ಟೇಯಾ.....
ಮನಸು ಕೊಟ್ಟೋ ಮನಸೊಳಗೆ ಕುಳಿತುಬಿಟ್ಟೆಯ.........!!

ಕ್ಲೀನ್ ಸಿಟಿ -- ಮೈಸೂರು
""ಸಾಂಸ್ಕೃತಿಕ ನಗರ "" ಮೈಸೂರಿಗೆ ಈಗ ಮತ್ತೊಂದು ಹೆಗ್ಗಳಿಕೆಯ ಸರದಿ,ದೇಶದ ಎರಡನೇ ಅತ್ಯಂತ ಸ್ವಚ್ಚ ನಗರವೆಂದು ಕೇಂದ್ರ ನಗರಾಭಿವೃದ್ಧಿ ಸಚಿವ ಶ್ರೀ ಜೈಪಾಲ್ ರೆಡ್ಡಿಯವರು ಪ್ರಕಟಿಸಿದ್ದಾರೆ.ಮೊದಲ ಸ್ಥಾನವು ಪಂಜಾಬ್ ಹಾಗೂ ಹರಿಯಾಣದ ರಾಜಧಾನಿ ಚಂಢೀಗಡದ ಪಾಲಾಗಿದೆ.ಇಡೀ ದೇಶಕ್ಕೆ ಎರಡನೇ ಸ್ಥಾನಗಳಿಸಿರುವ ಮೈಸೂರು " ಸೋ ಕಾಲ್ಡ್ " ಮೆಟ್ರೋಪಾಲಿಟನ್ ನಗರಿಗಳನ್ನು ಹಿಂದಿಕ್ಕಿ ನಗು ಬೀರಿದೆ.
ತ್ಯಾಜ್ಯ ಮತ್ತು ಕಸ ವಿಲೇವಾರಿ,ನಿರುಪಯುಕ್ತ ನೀರಿನ ನಿರ್ವಹಣೆ,ನೀರಿನ ಮರುಬಳಕೆ, ಒಳ ಚರಂಡಿ ವ್ಯವಸ್ಥೆ , ಸಾರ್ವಜನಿಕ ಶೌಚಾಲಯದ ನಿರ್ವಹಣೆ,ಜನರ ಆರೋಗ್ಯ ಸ್ಥಿತಿ ಗತಿಗಳ ಆಧಾರದ ಮೇಲೆ 3 ಖಾಸಗಿ ಸಂಸ್ಥೆಗಳು ನೆಡೆಸಿದ ಸಮೀಕ್ಷೆಯ ಪ್ರಕಾರ
ಚಂಢಿಗಡ ,ಮೈಸೂರು , ಸೂರತ್ , ನವದೆಹಲಿ ಮುನ್ಸಿಪಲ್ ಏರಿಯಾಸ್,ನವದೆಹಲಿ ಕಂಟೋನ್ಮೆಂಟ್ ಕ್ರಮವಾಗಿ 1,2,3,4,5ನೇ ಸ್ಥಾನ ಗಳಿಸಿದೆ. ರಾಜಧಾನಿ ಬೆಂಗಳೂರು ೧೨ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ ಮಂಗಳೂರು ೮ನೇ ಸ್ಥಾನಗಳಿಸಿ ರಾಜಧಾನಿಗೆ ಉತ್ತಮ ಪೈಪೋಟಿ ನೀಡಿದೆ, ಇದಲ್ಲದೆ ಕರ್ನಾಟಕದ "ಸಕ್ಕರೆ ನಗರಿ " ಮಂಡ್ಯ ೧೫ ಹಾಗೂ ಬೀದರ್ ೨೨ನೇ ಸ್ಥಾನಗಳಿಸುವಲ್ಲಿ ಸಫಲವಾಗಿದೆ.
ಕರ್ನಾಟಕದ ೨೪ ನಗರಗಳ ಸಹಿತ ದೇಶದ 423 ನಗರಗಳನ್ನು ಈ ಸಮೀಕ್ಷೆಯಲ್ಲಿ ಒಳಲ್ಪಡಿಸಲಾಗಿತ್ತು.ಉಳಿದಂತೆ ಶಿವಮೊಗ್ಗ,ಚಿತ್ರದುರ್ಗ ,ದಾವಣಗೆರೆ ಕ್ರಮವಾಗಿ 166,355,357 ನೇ ಸ್ಥಾನದಲ್ಲಿ ನಿಲ್ಲುವ ಮೊಲಕ ಸರ್ಕಾರಕ್ಕೆ ನೈರ್ಮಲ್ಯದ ಕುರಿತು ಹೆಚ್ಚಿನ ಗಮನ ನೀಡುವ ಬಗ್ಗೆ ಸಂದೇಶ ರವಾನಿಸಿದೆ.

Monday, May 10, 2010
ಇಡ್ಲಿ ಇತಿಹಾಸ
ಇಡ್ಲಿ ಅಂದ್ರೆ ಯಾರಿಗೆ ಇಷ್ಟ ಅಗೋಲ್ಲ ಹೇಳಿ...ಆಡೋ ಮಕ್ಕಳಿಂದ ಹಿಡಿದು ಅಲ್ಲಾಡೊ ಮುದುಕರವರೆಗೂ ಬೆಳಿಗ್ಗೆ ,ಮಧ್ಯಾಹ್ನ ,ರಾತ್ರಿ ಅನ್ನೊ ನಿರ್ದಿಷ್ಟ ಸಮಯದ ಅರಿವನ್ನು ಮರೆತು ತಿನ್ನಬಹುದಾದಂತಹ ಪೌಷ್ಠಿಕ ಹಾಗೂ ರುಚಿಕಟ್ಟಾದ ಆಹಾರ.ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿ ಸೂಜಿ ಚುಚ್ಚುಸ್ಕೊಂಡು ಮಾತ್ರೆ ಬರೆಸ್ಕೊಂಡು ಮನೆಗೆ ಬಂದಾದ್ ಮೇಲೆ ಅಯ್ಯೊ ,ಡಾಕ್ಟರ್ ಹತ್ರ ಏನ್ ತಿನ್ನಬಹುದು ಅಂತ ಕೇಳೊದ್ನ ಮರೆತು ಬಿಟ್ನಲ್ಲ ಅಂತ ಯಾರಾದ್ರು ಹೇಳುದ್ರೆ ,ಮರುಕ್ಷಣವೇ ಅವರು ಚಿಂತೆ ಮಾಡದೆ ತಿನ್ನೋದೆ ಇಡ್ಲಿ.ನಾನ್ ಚಿಕ್ಕವನಾಗಿದ್ದಾಗ ಮನೇಲಿ ನಾಳೆ ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡ್ತಾರೆ ಅಂತ ಗೊತ್ತದ್ರೆ ಸಾಕು,ರಾತ್ರಿಯಲ್ಲಾ ಕನಸಲ್ಲು ಇಡ್ಲಿನೇ,ಯಾವಾಗಪ್ಪ ಬೆಳಿಗ್ಗೆ ಆಗುತ್ತೆ ಅಂತ ಚಾತಕ ಪಕ್ಷಿ ತರ ಕಾಯ್ತಾ ಇರ್ತಿದ್ದೆ,
ಉತ್ತರ ಭಾರತದ ಕಡೆ ಇಡ್ಲಿ ಮಾಡ್ತಾರೆ ಆದ್ರೆ ದಕ್ಷಿಣ ಭಾರತದಲ್ಲಿ ಮಾಡಿದಷ್ಟು ಖದರ್ ಇರೋಲ್ಲ..ಅದಕ್ಕೆ ತಕ್ಕ ರೀತಿಯ ರುಚಿಯಾದ ಸಾಂಬಾರ್ ಕೂಡ ಇರಬೇಕು,ಇಡ್ಲಿ ಕಾಲಕ್ಕೆ ತಕ್ಕಂತೆ ಹೆಸರು,ವಿವಿಧ ಪ್ರದೇಶಕ್ಕೆ ತಕ್ಕಂತೆ ಆಕಾರ,ರುಚಿ ಬದಲಾಯಿಸಿಕೊಂಡಿದೆ ಎಂದರೆ ತಪ್ಪಾಗಲಾರದು.ಬಿಬಿಸಿ ವಾರ್ತೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಇಡ್ಲಿಯು "ಜಗತ್ತಿನ ಹತ್ತು ಅದ್ಭುತ ಉಪಹಾರಗಳಲ್ಲಿ " ಒಂದೆನಿಸಿಕೊಂಡಿದೆ. ಹೌದು ...ನಿಮಗೆ ಇಡ್ಲಿ ಎಲ್ಲಿಂದ ,ಹೇಗೆ ,ಯಾವಗ ಬಂತು ಅಂತ ಗೊತ್ತಾ..??
ಇಡ್ಲಿಯ ಇತಿಹಾಸದ ಬಗ್ಗೆ ಇಲ್ಲೊಂದು ಕಿರು ಮಾಹಿತಿ.
ಇತಿಹಾಸ ಇಡ್ಲಿದು ಅಗಿರಲಿ,ಇಂಡಿಯಾದೆ ಅಗಿರಲಿ...ಇತಿಹಾಸ ಅಂದಮೇಲೆ ವಿವಾದ,ಗೊಂದಲ,ಊಹಾಪೋಹ ಇದ್ದೇ ಇರುತ್ತದೆ.ಆದ್ರೆ ನಾನಿಲ್ಲಿ ಕೆಲವು ಒಪ್ಪಬೇಕಾದ ಮಾಹಿತಿಯ ಆಧಾರದ ಮೇಲೆ ಅರ್ಥೈಸುವುದಕ್ಕೆ ಪ್ರಯತ್ನಿಸುತ್ತೀನಿ.
ಕ್ರಿಸ್ತ ಶಕ 920ರಲ್ಲಿ ಕನ್ನಡದ ಮೊದಲ ಕೃತಿಯನಿಸಿಕೊಂಡಿರುವ "ವಡ್ದಾರಾಧನೆ" ಯಲ್ಲಿ ಶಿವಕೊಟ್ಯಾಚಾರ್ಯರು "ಇಡ್ಡಲಿಗೆ" ಅನ್ನುವ ಶಬ್ಧವನ್ನು ಉಪಯೋಗಿಸಿರುತ್ತಾರೆ, ನಂತರ ಕ್ರಿಸ್ತ ಶಕ 1025 ""ಎರಡನೇ ಚಾವುಂಡರಾಯ "" ತನ್ನ ""ಲೋಕೊಪಕಾರ"" ಕೃತಿಯಲ್ಲಿ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಮೇಲೆ ಅದನ್ನು ,ಮೊಸರು ಹಾಗೂ ಕಾಳು ಮೆಣಸಿನ ಸಹಿತ ರುಬ್ಬಿ ತಯಾರಿಸುವ ಪದಾರ್ಥದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರಿಸ್ತ ಶಕ 1130 ರಲ್ಲಿ ಸಂಸ್ಕೃತದಲ್ಲಿ ಕರುನಾಡನ್ನು ಆಳಿದ ದೊರೆ ಹಾಗೂ ಸ್ವತಃ ವಿದ್ವಾಂಸನಾಗಿದ್ದ ಮೊರನೇ ಸೋಮೇಶ್ವರ ಬಲ್ಲಾಳನಿಂದ ವಿರಚಿತ "ಮಾನಸೋಲ್ಲಾಸ" ದಲ್ಲಿ "ಇಡ್ಡರಿಕಾ" ಎಂಬ ಪದದ ಪ್ರಯೋಗವಾಗಿದೆ. ಈ ಕೃತಿಗಳಲ್ಲಿ ಕಂಡು ಬರುವ ಹಳಗನ್ನಡ ಪದಗಳಲ್ಲಿ ಕೆಲವು ಕರಾವಳಿಯ "ತುಳು " ಭಾಷೆಯಲ್ಲಿ ಇಂದಿಗೂ ಪ್ರಚಲಿತ.ಇಡ್ಲಿಯನ್ನು ಬೇಯಿಸುವುದಕ್ಕೆ ಬೇಕಾಗಿರುವುದು ಹಬೆ..ಇವಾಗೇನೋ ಸಾಕಷ್ಟು ರೀತಿಯ "ಇಡ್ಲಿ ಕುಕ್ಕರ್ " ಗಳು ಲಭ್ಯ...ಆದರೆ ಹಿಂದಿನ ಕಾಲದಲ್ಲಿ ಪಾತ್ರೆಯನ್ನು ಬಟ್ಟೆ ,ಬಾಳೆ ಅಥವಾ ಬೇರೆ ಎಲೆಗಳಿಂದ ಮುಚ್ಚಿ ಹಬೆಯನ್ನು ತಡೆ ಹಿಡಿಯಲಾಗುತ್ತಿತ್ತು.ಈಗಲೂ ಕೂಡ ಬಾಳೆ ಎಲೆಗಳಿಂದ ಸುತ್ತಿ ಹಬೆಯಲ್ಲಿ ಬೇಯಿಸುವ ಹಲವು ಖಾದ್ಯಗಳು ಸಿಗುವುದುಂಟು.
"ಮುಡೆ"" ಎಂಬ ಈ ತಿನಿಸು ಇಡ್ಲಿಯ ರೀತಿಯೇ ಮಾಡುವುದು ಆದರೆ ಆಕಾರ ಬೇರೆ ,ಅದನ್ನು ಸುತ್ತಿರುವ ಎಲೆಯನ್ನು ಚಿತ್ರದಲ್ಲಿ ನೀವು ಕಾಣಬಹುದು,
ಭಾರತೀಯ ಆಹಾರ ಹಾಗೂ ಆಹಾರ ಪದ್ದತಿಯ ಕುರಿತು ಅಧ್ಯಯನ ನಡೆಸಿರುವ " ಕೆ.ಟಿ. ಅಚಯ್ಯ" ಎಂಬ ಸಂಶೋಧಕನ ಪ್ರಕಾರ ಇಡ್ಲಿ ತಯಾರಿಸುವ ವಿಧಾನವನ್ನೇ ಹೋಲುವ ಕೆಲವು ಪದಾರ್ಥಗಳು ಇಂಡೋನೇಷ್ಯಾದಲ್ಲಿ ಕ್ರಿಸ್ತ ಶಕ ೧೨೫೦ ರಿಂದಲೇ ಚಾಲ್ತಿಯಲ್ಲಿದೆ.ಆದರೆ ನಮ್ಮ ಹಳಗನ್ನಡದ ಪುರಾವೆಗಳ ಪ್ರಕಾರ ಇಂಡೋನೇಷ್ಯಾಕ್ಕಿಂತ ಮೊದಲು ಕರ್ನಾಟಕದಲ್ಲಿ ಶುರುವಾಗಿತ್ತೆಂಬ ಸ್ಪಷ್ಟ ನಿಲುವಿಗೆ ಬರಬಹುದು,
ಇವಿಷ್ಟು ಸಾಮಾನ್ಯ ಇಡ್ಲಿ ಬಗ್ಗೆಯ ಇತಿಹಾಸವಾದರೆ,ರವೆ ಇಡ್ಲಿ ಮಾತ್ರ ಕರ್ನಾಟಕ ಬಿಟ್ರೆ ಪ್ರಪಂಚದ ಯಾವುದೇ ಭಾಗದ ಜನರು
ಅದು ಅವರದ್ದು ಅಂತ ವಾದ ಮಾಡೋಕೆ ಅಗೋಲ್ಲ,ರವೆ ಇಡ್ಲಿ ಅಪ್ಪಟ ಕನ್ನಡ ನಾಡಿನದು. ಪ್ರಪಂಚ ಎರಡನೆ ಮಹಾ ಯುಧ್ದದ ವೇಳೆ ಅಕ್ಕಿ ಸಿಗುವುದು ದುಸ್ತರವಾದಾಗ "ಮಾವಳ್ಳಿ ಟಿಫನ್ ರೂಮ್"" ರವರು ಅಕ್ಕಿಯ ಬದಲಿಗೆ ರವೆಯನ್ನು ಉಪಯೋಗಿಸಿ ಮಾಡಿದ ಪ್ರಯೋಗವೆ ಕನ್ನಡಿಗರ ಹೆಮ್ಮೆಯ "ರವೆ ಇಡ್ಲಿ". ದಯವಿಟ್ಟು ಇದನ್ನು "ರವಾ ಇಡ್ಲಿ " ಎನ್ನಬೇಡಿ ,ಅಚ್ಚ ಕನ್ನಡದಲ್ಲಿ "ರವೆ ಇಡ್ಲಿ " ಎಂದು ಕರೆಯಿರಿ.
ಮಲ್ಲಿಗೆ ಇಡ್ಲಿ ಅಂತ ಇತ್ತೀಚೆಗೆ ಮಲ್ಲಿಗೆಯಷ್ಟೇ ಮೃದುವಾಗಿರೋ ಇಡ್ಲಿ
ಆಕಾರದಲ್ಲಿ ವಿವಿಧತೆಯಿರುವ ಇಡ್ಲಿಯ ಚಿತ್ರಗಳನ್ನು ಇಲ್ಲಿ ನೋಡಬಹುದು.
ಕರ್ನಾಟಕದ ಕರಾವಳಿಯ ಕಡೆ ಸಿಗುವ ಇಡ್ಲಿ.
ತಟ್ಟೆ ಆಕಾರದಲ್ಲಿ ಸಿಗುವ ತಟ್ಟೆ ಇಡ್ಲಿ.
ಕಾಂಚೀಪುರಂ ನಲ್ಲಿ ಸಿಗುವ ಲೋಟದ ಆಕಾರದ ಇಡ್ಲಿ.
ಚಿಕ್ಕ ಚಿಕ್ಕ ಇಡ್ಲಿಯನ್ನು ತಯಾರಿಸಿದ ನಂತರ ಮೊಸರಿನಲ್ಲಿ ಕೆಲ ಕಾಲ ನೆನೆಸಿಟ್ಟು ತಿನ್ನುವ "ಮೊಸರು ಇಡ್ಲಿ"
ಇಂದಿನ ವಿಶೇಷ--- ಮೇ 10
ಡಾ||ಚಿದಾನಂದ ಮೊರ್ತಿ -- ಹುಟ್ಟು ಹಬ್ಬ
""ಸಂಶೋಧನೆಯ ಸಂಶೋಧಕ"" ,""ಕನ್ನಡ ಜಂಗಮ"" ,""ಒಂಟಿ ಸಲಗ"" ಎಂಬ ಬಿರುದಾಂಕಿತರಾಗಿ,ಕನ್ನಡ ಭಾಷೆ ,ನೆಲ,ಜಲದ ಬಗ್ಗೆ ಹತ್ತು ಹಲವು ಹೋರಾಟಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ,ಸದಾ ಕನ್ನಡಿಗರನ್ನು ತಮ್ಮ ಅಸ್ಥಿತ್ವದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಜಾಗೃತಿ ಮೊಡಿಸುತ್ತಿರುವ ,ಅಭಿಮಾನಿಗಳಿಂದ ಪ್ರೀತಿಯಿಂದ "" ಚಿಮೊ"" ಎಂದೆ ಕರೆಯಲ್ಪಡುವ "" ಚಿದಾನಂದ ಮೊರ್ತಿ"" ಯವರಿಗೆ ಇಂದು ಎಂಭತ್ತರ ಸಂಭ್ರಮ.1931ರ ಮೇ 10 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಎಂಬ ಗ್ರಾಮದಲ್ಲಿ ಜನನ.
""ಸಂಶೋಧನೆ ನನ್ನ ಮೂದಲನೆ ಪ್ರೇಮ,ಚಳುವಳಿ ನನ್ನ ಎರಡನೇ ಪ್ರೇಮ ಮತ್ತು ಕೊನೆಯ ವ್ಯಾಮೋಹ,ನನ್ನ ಮಟ್ಟಿಗೆ ಸಂಶೋಧನೆ ಮತ್ತು ಚಳುವಳೆಗಳೆರಡೂ ಪರಸ್ಪರ ವಿರೋಧವಾದುದೇನೂ ಅಲ್ಲ,ಎರಡರ ಮುಂದಿರುವುದು ಕರ್ನಾಟಕವೇ,ಸತ್ಯವನ್ನು ಕಾಣಲು ,ನನ್ನನ್ನು ನಾನು ತಿಳಿಯಲು ಎರಡು ಬೇರೆ ಬೇರೆ ಮಾರ್ಗಗಳು ಮಾತ್ರ"" ಅನ್ನುವ ಚಿಮೊ ಅವರು ತಮ್ಮದೇ ಶೈಲಿಯಲ್ಲಿ ಕನ್ನಡ ಪರ ಹೋರಾಟವನ್ನು ನಿರ್ದೇಶಿಸುತಿದ್ದರು.
ಸರೋಜಿನಿ ಮಹಿಷಿ ವರದಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸಿ ವರ್ಗದ ಹುದ್ದೆಗೆ ಕನ್ನಡ ಕಡ್ಡಾಯ,ಕನ್ನಡ ನಾಮಫಲಕ ಆಜ್ನೆ,ಉರ್ದು ವಾರ್ತೆ ವಿರೋಧ,ಕಾವೇರೆ ಜಲವಿವಾದ,ಗೋಕಾಕ ಚಳುವಳಿ,ಬೆಳಗಾವಿ ಸಂಬಂಧ ಹೋರಾಟ ಸಹಿತ ಅನೇಕಾನೇಕ ಅವರ ಹೆಜ್ಜೆಗುರುತುಗಳು ಬೃಹದಾಕಾರವಾಗಿ ಮೊಡಿದೆ.
ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ,ಶೂನ್ಯ ಸಂಪಾದನೆ ಕುರಿತು,ಸಂಶೋಧನಾ ತರಂಗ,ಸಂಶೋಧನೆ,ಗ್ರಾಮೀಣ ಅಧ್ಯಯನ,ವಾಗರ್ಥ ಇನ್ನು ಹಲವಾರು ಕೃತಿಗಳು ಇವರ ಲೇಖನದಿಂದ ಚಿಮ್ಮಿರುವ ಕಾರಂಜಿಗಳು.
ಸರ್ಕಾರ,ಸಂಘ ಸಂಸ್ಥೆಗಳು ಇವರಿಗೆ ವಿವಿಧ ರೀತಿಯ ಪ್ರಶಸ್ತಿ ಪಾರಿತೋಷಕಗಳನ್ನಿತ್ತು ಗೌರವಿಸಿದೆ. ಪಂಪ ಪ್ರಶಸ್ತಿ ,ನಾಡೋಜ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನರಾಗಿರುವ ಚಿಮೊ ಭವಿಷ್ಯದಲ್ಲಿ ಇನ್ನು ಹೆಚ್ಚು ಹೆಚ್ಚು ಸಂಶೋಧನೆ ನೆಡಸಲಿ,ಹೋರಾಟದ ಮುಂದಾಳತ್ವ ವಹಿಸಲಿ ,ನೂರ್ ಕಾಲ ಬಾಳಲಿ ಎಂದು ಅವರ ಜನ್ಮದಿನದಂದು ಶುಭಾಶಯವನ್ನು ಕೋರೋಣ,
Sunday, May 9, 2010
ಇಂದಿನ ವಿಶೇಷ--- ಮೇ ೯
ಮೇ ೯ ,
ಹುಟ್ಟು ಸೇನಾನಿ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ "ಅನಕೃ" ಅವರ ಜನ್ಮದಿನ.ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿಯು ತಮ್ಮದೇ ಆದ ಛಾಪನ್ನು ಮೊಡಿಸಿದ ಅಪ್ಪಟ ಕನ್ನಡಿಗರೆನಿಸಿಕೊಂಡರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಮೇಧಾವಿ.
ಒಮ್ಮೆ ಒಂದು ತುಂಬು ಸಭಾಂಗಣದಲ್ಲಿ "ಕನ್ನಡದ ಆಸ್ತಿ" ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಸಭಿಕರಿಗೆ ಅನಕೃ ಅವರನ್ನು ಪರಿಚಯ ಮಾಡಿಸಿಕೊಟ್ಟ ಪರಿ ಹೀಗಿತ್ತು. """ ನಾನು ತಮಿಳ್ ಕನ್ನಡಿಗ,ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಮ್ ಕನ್ನಡಿಗ,ಅನಕೃ ಅಪ್ಪಟ ಕನ್ನಡಿಗ """,, ಕನ್ನಡದ ಮೇರು ಸಾಹಿತ್ಯಗಾರ,ಅತ್ಯುನ್ನತ ಙ್ನನಪೀಠ ಪ್ರಶಸ್ತಿ ವಿಜೇತರೊಬ್ಬರು ಇನ್ನೋರ್ವ ಸಾಹಿತಿಯನ್ನು ಈ ರೀತಿಯ ವಾಕ್ಯಗಳಲ್ಲಿ ಬಣ್ಣಿಸಿದಾಗ ಅನಕೃರವರಿಗೆ ಕನ್ನಡ ಭಾಷೆಯ ಮೇಲಿನ ಪ್ರೀತಿ,ಅಭಿಮಾನ,ಭಕ್ತಿಯ ಆಳದ ಅರಿವಾಗುತ್ತದೆ.
ಅನಕೃ ಅವರ ಪೂರ್ಣ ಹೆಸರು "'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್"" ,ಇಂದಿಗೆ ಸರಿಯಾಗಿ ೧೦೨ ವರ್ಷಗಳ ಹಿಂದೆ ಮೇ ೯ ರಂದು ಕೋಲಾರದಲ್ಲಿ ಜನಿಸಿದರು,ಕನ್ನಡದ ಸಾಹಿತ್ಯ ಕೃಷಿಯಲ್ಲಿ ನೇರ ನುಡಿ,ಕಟು ಸತ್ಯದಂತಹ ಕೃತಿಗಳಿಗೆ ನಾಂದಿ ಹಾಡಿದವರು, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ನಾಯಕತ್ವ ವಹಿಸಿದರು.
ಸಾಹಿತ್ಯ ಮತ್ತು ಕಾಮಪ್ರಚೋದನೆ,ಕಾಮನಬಿಲ್ಲು,ಸಂಧ್ಯಾರಾಗ,ನಟಸಾರ್ವಭೌಮ,ಬಣ್ಣದ ಬೀಸಣಿಗೆ,ರಾಜ ನರ್ತಕಿ,ನನ್ನನ್ನು ನಾನೆ ಕಂಡೆ, ಅನಕೃ ರವರ ಲೇಖನದಿಂದ ಹೊರಬಂದ ಹಲವಾರು ಕೃತಿಗಳಲ್ಲಿ ಕೆಲ ಉದಾಹರಣೆಗಳು.ಮಣಿಪಾಲ್ ನಲ್ಲಿ ನಡೆದ ೪೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೭೧ ಜುಲೈ ೮ ರಂದು ಇಹಲೋಕ ತ್ಯಜಿಸಿದ "ಅಪ್ಪಟ ಕನ್ನಡಿಗ" ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿ.
ಎಲ್ಲಿದೆ ಈ ಏರಿಯಾ??
ಮಾಂಸಹಾರಿಗಳಿಗೆ ಮಾತ್ರ!!
ಶೀರ್ಷಿಕೆ ಹೇಳೊ ಪ್ರಕಾರ ಈ ಅಂಕಣ ಮಾಂಸಾಹಾರಿಗಳಿಗೆ ಮಾತ್ರ ಅನ್ನೋದು ನಿಜ ಆದ್ರು ಸಸ್ಯಹಾರಿಗಳು ಓದುದ್ರೆ ತಪ್ಪೇನಿಲ್ಲ ಬಿಡಿ!!....ಮತ್ತೆ "ಮಾಂಸಹಾರಿಗಳಿಗೆ ಮಾತ್ರ!!" ಅನ್ನೋ ಶೀರ್ಷಿಕೆ ಯಾಕಪ್ಪ ಅಂತ ನಿಮಗೆ ಈ ಅಂಕಣದ ಕೊನೇಲಿ ಗೊತ್ತಾಗುತ್ತೆ.
ನಮ್ಮ ಕರ್ನಾಟಕದ ಯಾವುದೇ ಮೊಲೆಗೆ ಹೋದ್ರು ನಿಮಗೆ ಇಡ್ಲಿ,ವಡೆ,ಅವಲಕ್ಕಿ,ದೋಸೆ,ಬಿಸಿ ಬೇಳೆ ಬಾತ್,ಪೊಂಗಲ್,ಉಪ್ಪಿಟ್ಟು,ಕೇಸರಿಬಾತ್ ಇತ್ಯಾದಿ ಇತ್ಯಾದಿ ಸಿಕ್ಕೆ ಸಿಗುತ್ತೆ,ಇವಿಷ್ಟು ಸಸ್ಯಾಹಾರದಲ್ಲಿ ಸಿಗೋ ತಿಂಡಿ ಪದಾರ್ಥಗಳು ಅಂತ ಎಲ್ಲರಿಗೂ ಗೊತ್ತಿರೊ ವಿಷಯ,ಇನ್ನು ಕೆಂಪು ತರಕಾರಿ( ಮಾಂಸ) ಬಗ್ಗೆ ಹೇಳಬೇಕೆಂದ್ರೆ ತಮ್ಮ ತಮ್ಮ ಧರ್ಮಕ್ಕೆ ಅನುಸಾರವಾದ ಚೌಕಟ್ಟಿನಲ್ಲಿ ಏನೇನ್ ತಿನ್ನಬಹುದೋ ಎಲ್ಲಾ ಸಿಗುತ್ತೆ, ನೀವೇನಾದ್ರು ಕನ್ನಡದ "ಮುಂಗಾರಿನ ಮಿಂಚು" ಫಿಲ್ಮ್ ನೋಡಿದ್ರೆ ಇನ್ನ ಬೇರೆ ಬೇರೆ ಪ್ರಾಣಿಗಳಿಂದ ಮಲೆನಾಡಿನಲ್ಲಿ ಏನೆಲ್ಲಾ ಖಾದ್ಯಗಳನ್ನ ಮಾಡ್ತಾರೆ ಅನ್ನೋದು ಪರಿಚಯ ಅಗಿರುತ್ತೆ ..ಮೃಗಾಲಯದಲ್ಲಿ,ಡಿಸ್ಕವರಿ ಚಾನಲ್ ನಲ್ಲಿ, ಕಾಣ ಸಿಗುವಂತಹ ಪ್ರಾಣಿಗಳು ರಾತ್ರಿ ಊಟಕ್ಕೆ ನಿಮ್ ತಟ್ಟೆಗಳಲ್ಲಿ ಫ್ರೈ ಆಗಿ ಸಿಕ್ ಬಿಟ್ರೆ!!!!!!!!
ಸಿಗುತ್ತೆ ರೀ,....ಯಾಕ್ ಸಿಗೊಲ್ಲ...?? ಸಿಹಿ ಸುದ್ದಿ ಏನಂದ್ರೆ ಅ ತರಹದ ಮಾಂಸಗಳೆಲ್ಲಾ ದೊರೆಯುವ ಹೋಟ್ಲು ಇದೆ.....ಕಹಿ ಸುದ್ದಿ ಅಂದ್ರೆ ಅದು ನಮ್ ದೇಶದಲ್ಲಿ ಇಲ್ಲ....ಅದಿರೋದು ದಕ್ಷಿಣ ಆಫ್ರಿಕಾದ ಜೋಹಾನ್ಸಬರ್ಗ್ ನಲ್ಲಿ....ನಾನು ಅಲ್ಲಿಗೆ ಹೋದಾಗ ನಾನು ಕಂಡದ್ದು,ಕುಡಿದದ್ದು,ತಿಂದಿದ್ದು,ತೇಗಿದ್ದರ ಬಗ್ಗೆ ಅನುಭವದ ಒಂದು ಚಿಕ್ಕ ಬುತ್ತಿ.
ಅವತ್ತು ಶುಕ್ರವಾರ....ಸಂಜೆ ೩ ಘಂಟೆಗೆ ಆಫೀಸ್ ಮುಗಿಯುವಷ್ಟರಲ್ಲಿತ್ತು ,ಅಂತ ಏನು ಕಡಿದು ಎತ್ತಿ ಹಾಕೋ ಕೆಲಸನು ಇರ್ಲಿಲ್ಲ ಅದಕ್ಕೆ ಬೇಗ ಎಸ್ಕೇಪ್ ಆದೆ,.ಅಷ್ಟರಲ್ಲಿ ಆಫೀಸ್ ಹೊರಗೆ ನನ್ ಫ್ರೆಂಡ್ಸ್ ಸಂಜೆ ಏನ್ ಮಾಡೋದು ಅಂತ ಪ್ಲಾನ್ ಹಾಕ್ತಾ ಇದ್ರು ,ಆ ಕ್ಷಣದಲ್ಲಿ ಏನು ನಿರ್ಧಾರ ಆಗ್ಲಿಲ್ಲ ಅದಕ್ಕೆ ರೂಮ್ ಕಡೇ ಹೋಗಿ ಫ್ರೆಶ್ ಆಗಿ ವಾಪಸ್ ಬಂದು ಟೆನ್ನಿಸ್ ಆಡ್ತಾ ಇದ್ವಿ,ಅಷ್ಟರಲ್ಲಿ ಎಂದಿನಂತೆ ನಮ್ ಡ್ರೈವರ್ ಕ್ರಿಸ್ ಬಂದು ಇವತ್ತು ಹೇಗಿದ್ರು ಶುಕ್ರುವಾರ ಹೊರಗಡೆ ಹೋಗೋ ಪ್ಲಾನ್ಸ್ ಏನಾದ್ರು ಇದ್ಯ ಅಂತ ಲೋಕಾಭಿರಾಮವಾಗಿ ಮಾತಾಡ್ಕೊಂಡ್ ಬಂದ,ಕ್ರಿಸ್ ಮಾತಿಗೆ "ಆಂಡ್ರೆ" ಹೊರಗೆ ಎಲ್ಲಾದರೂ ಊಟಕ್ಕೆ ಹೋಗೋಣ ಅಂತಿದ್ದೀವಿ ನಿನಗೆ ಯಾವುದಾದರು ಒಳ್ಳೆ ರೆಸ್ಟೊರೆಂಟ್ ಗೊತ್ತಿದ್ದರೆ ಅಲ್ಲಿಗೆ ಗಾಡಿ ಹೊಡಿ ಅಂದು ಸುಮ್ಮನಾದ.ಇದನ್ನು ಕೇಳಿದ್ದೆ ತಡ ಕ್ರಿಸ್ "ಕಾರ್ನಿವೋರ್" ಗೆ ಎಂಬ ಹೆಸರಿನ ಹೋಟ್ಲು ಇಲ್ಲೆ ಹತ್ತಿರದಲ್ಲಿದೆ ,ತುಂಬಾ ವಿಶಿಷ್ಟವಾಗಿದೆ ,ನಿಮ್ಮೆಲ್ಲರಿಗೂ ಖಂಡಿತ ಇಷ್ಟ ಅಗುವುದು ಎಂಬ ಮಾತು ಮುಗಿಯುವ ಮುನ್ನವೆ ಗಾಡಿ ಸ್ಟಾರ್ಟ್ ಮಾಡ್ಬಿಟ್ಟ....ಧಡಿ ನನ್ಮಗ!!
ನಾವು ಹೊರಟಾಗ ಸಂಜೆ ೫:೩೦ ಅನ್ಸುತ್ತೆ....ಆಗ ತಾನೆ ಸೂರ್ಯ ತನ್ನ ಕೆಲಸ ಮುಗಿಸಿ ಮೊತಿ ಕೆಂಪಾಗಿ ಊದಿಸಿಕೊಂಡು ಮನೆ ಕಡೇ ಮುಖ ಮಾಡಿದ್ದ ,ಪಕ್ಷಿಗಳು ತಮ್ಮ ತಮ್ಮ ಡ್ಯೂಟಿ ಮುಗಿಸಿಕೊಂಡು ಗೂಡಿನ ಕಡೆ ರೆಕ್ಕೆ ಬಡಿದುಕೊಂಡು ಹಾರ್ತಾ ಇದ್ವು ,ಸಂಜೆಯ ಹೊತ್ತಿನಲ್ಲಿ ಸುಯ್ಯನೆ ತೇಲಿ ಬರುತಿದ್ದ ಇಬ್ಬನಿ ಮಿಶ್ರಿತ ಗಾಳಿ ಹೆಚ್ಚು ಕಮ್ಮಿ ನಮ್ಮ ಬೆಂಗಳೊರಿನ ಹವಾಗುಣದ ರೀತಿಯನ್ನೆ ನೆನಪಿಗೆ ತರುತಿತ್ತು. "ಮಿಡ್ರ್ಯಾಂಡ್ " (ನಾನು ವಾಸವಿದ್ದ ಸ್ಥಳ,ಜೋಹಾನ್ಸ್ ಬರ್ಗ್ ಅತಿ ಮುಖ್ಯವಾದ ಹೊರವಲಯ) ಯಿಂದ ಹೊರಟ ನಾವು ಗ್ಲೂಲಿ ಇಂಟರ್ ಸೆಕ್ಷನಲ್ಲಿ ಎನ್೩ ನಾರ್ಥ್ ಹೈವೇ ಸುತ್ತುವರೆದು ಮುಲ್ಡರ್ಸ್ ಡ್ರಿಫ್ಟ್ ಅಥವಾ ಡ್ರಿಫ್ಟ್ ಬೊಲಿವರ್ಡ್ ಎಂದು ಕರೆಯಲ್ಪಡುವ ಜಾಗಕ್ಕೆ ತಲುಪಿದೆವು.
" ಕಾರ್ನಿವೋರ್ " ಅಂತ ಮರದ ಹಲಗೆಯ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಮರದ ತುಂಡುಗಳಿಂದ ಜೋಡಿಸಿದ್ದರು ,ಆ ಹಲಗೆಯನ್ನು ಎರಡು ದೊಡ್ದ ಕಂಬಗಳ ಮಧ್ಯ ತೂಗು ಹಾಕಿದ್ದರು.ಗಾಡಿಯಿಂದಿಳಿದು ಮರದಿಂದ ನಿರ್ಮಿತವಾದ ಕಿರು ಸೇತುವೆಯನ್ನು ದಾಟಿದಾಗ ನಾನು ಕಂಡದ್ದು ಮರದ ದಿಮ್ಮಿಗಳಿಂದ ಕಟ್ಟಿದ್ದ ಗೋಡೆಗಳು ನಮ್ಮ ಮಲೆನಾಡಿನ ಮನೆಗಳನ್ನು ನೆನಪಿಗೆ ತರುವಂತಿತ್ತು,ವಿವಿಧ ಪ್ರಾಣಿಗಳ ಮರದ ಆಕೃತಿಗಳು,ಮರದ ಮೇಜು,ಮರ ಕುರ್ಚಿಗಳು.....ನಾವು ಒಂದು ಚಿಕ್ಕ ಅರಣ್ಯದಲ್ಲಿರುವಂತೆ ಭಾಸವಾಗುತಿತ್ತು.ನಮ್ಮ ಗುಂಪಿನಲ್ಲಿ ಇದ್ದ ೮ ಜನರು ದೊಡ್ಡ ಟೇಬಲನ್ನು ಆಕ್ರಮಿಸಿಕೊಂಡೆವು.ಈಗ ವಾಡಿಕೆಯಂತೆ " ತಿನ್ನೋಕೆ ಏನ್ ಏನಿದ್ಯಪ್ಪಾ " ಅಂತ ಕೇಳೋದು ನಮ್ ರೂಡೀ....ಆಗ ಅಲ್ಲಿಗೆ ಬಂದ ಮಾಣಿ (waiter) ಇವತ್ತು ನಾವು ಇಲ್ಲಿ ಏನ್ ಏನು ಎಷ್ಟ್ ಎಷ್ಟು ತಿನ್ನಬಹುದು ಅಂತ ಸಂಕ್ಷಿಪ್ತವಾಗಿ ವಿವರಿಸಿ ಹಿಂತಿರುಗಿದ,(ಆ ವೈಟರ್ ಚಿತ್ರ ಕೆಳಗಿದೆ ನೋಡಿ
).ಈ ವಿವರಣೆಯೇ ನನ್ನ ಅಂಕಣದ ಪ್ರಮುಖ ಅಂಶ,ಅದು ಏನೇಂದರೆ...................................................
ಈ ಹೋಟೆಲ್ ಪ್ರತಿ ದಿನ ೧೫ ರೀತಿಯ ಪ್ರಾಣಿ ಪಕ್ಷಿಗಳ ಮಾಂಸವನ್ನು ಗ್ರಾಹಕರಿಗೆ ಉಣಬಡಿಸುತ್ತದೆ, ಹಾರುವ,ನಡಿಯುವ,ಈಜುವ,ತೆವಳುವ, ಎಂಬ ಭೇಧ ಬಾವವಿಲ್ಲದೆ ಎಲ್ಲಾ ಪ್ರಾಣಿಗಳು ನಿಮ್ಮ ಸೇವೆಗೆ ಲಭ್ಯ, ಅದರಲ್ಲಿ ಕನಿಷ್ಠ ಪಕ್ಷ ೫ ಖಾದ್ಯವಾದರು "ಗೇಮ್ ಮೀಟ್" ಆಗಿರುವುದು ವಿಶೇಷ. ( ಗೇಮ್ ಮೀಟ್ -- ಸಾಕು ಪ್ರಾಣಿಗಳಲ್ಲದೆ ಮಾಂಸಕ್ಕಾಗಿಯೇ ಬೇಟೆಯಾಡಲ್ಪಡುವ "ಕಾಡು" ಪ್ರಾಣಿಗಳು ಎಂದೆನ್ನಬಹುದು, ಉದಾಹರಾಣೆಗೆ : ಜಿಂಕೆ,ಕಾಡುಹಂದಿ ಇತ್ಯಾದಿಗಾಳನ್ನು ಬೇಟೆಯಾಡಿಯೇ ತಿನ್ನಬೇಕಾಗುತ್ತದೆ....ಜಿಂಕೆ ನಿಷೇಧಿತ ಪ್ರಾಣಿ ಸುಮ್ಮನೆ ಉದಾಹರಣೆ ಕೊಟ್ಟೆ ಅಷ್ಟೆ.) ಇಂದು ನಮ್ಮ ಪಾಲಿಗೆ ಒಂಟೆ,ಮೊಸಳೆ,ಜಿರಾಫೆ,ಆಸ್ಟ್ರಿಚ್,ಜೀಬ್ರಾ,ಕಾಡು ಹಂದಿ,ಆಂಟಿಲೋಪ್,ಇಂಪಾಲ,ಗೋ ಮಾಂಸ,ಮೇಕೆ, ಕೋಳಿ,ಕಾಡು ಕೋಣ,ಆಫ್ರಿಕಾದ ಕಾಡಲ್ಲಿ ಸಿಗುವ ಪಾರಿವಾಳ ರೀತಿಯ ಪಕ್ಷಿಗಳು, ಔತಣ ಕೂಟಕ್ಕೆ ಸಜ್ಜಾಗಿದ್ದವು...ಇಲ್ಲಿ ಯಾವ ಯಾವ ಪ್ರಾಣಿ ತಿನ್ನಲು ಲಭ್ಯ ಎನ್ನುವಂತೆ ಅದರ ಚಿತ್ರಗಳನ್ನು ಸಹ ಈ ರೀತಿ ತೂಗು ಹಾಕಾಲಾಗಿತ್ತು.ಅದೃಷ್ಟವಶಾತ್ ಆವತ್ತು ನಮ್ಮ ಪಾಲಿಗೆ ಆನೆ ಹಾಗೂ ಹಾವು ಇರಲಿಲ್ಲ.,,,,ಇಷ್ಟೆಲ್ಲಾ ಪ್ರಾಣಿಗಳ ಹೆಸರು ಒಮ್ಮೆಲೆ ಕೇಳಿ ಸ್ವಲ್ಪ ಅಂಜಿಕೆ ಶುರುವಾಯಿತು,ನೀರಿಗೆ ಇಳಿದ್ದಿದ್ದಾಗಿದೆ ಇನ್ನು ಚಳಿಯೇನು ಮಳೆಯೇನು,ದನದ ಮಾಂಸ ಬಿಟ್ಟು ಇನ್ನೆಲ್ಲದರ ರುಚಿ ನೋಡೆಬಿಡೋಣ ಎಂದು ನಿರ್ಧರಿಸಿ ಅರಣ್ಯ ಭೋಜನಕ್ಕೆ ಸಿದ್ದನಾದೆ.
ಮೂದಲಿಗೆ ನಮ್ಮ ಟೇಬಲ್ ಮೇಲೆ ಬಂದಿದ್ದು ಸ್ಟಾರ್ಟರ್ಸ್...ಸೂಪ್ ಹಾಗೂ ಕಾರ್ನಿವೋರ್ ಹನಿ ಬ್ರೆಡ್ .
ನಂತರ ೬ ವಿಧವಾದ ಸಲಾಡ್ ಹಾಗೂ ಸಾಸ್ ,ಆ ಸಲಾಡ್ ಗಳಿಗೆ ಕನ್ನಡದಲ್ಲಿ ಏನಂತಾರೆ ಅಂತ ನನಗೂ ಗೊತ್ತಿಲ್ಲ,ಆ ಹೆಸರುಗಳು ಈ ರೀತಿಯಾಗಿ ಇತ್ತು..ಗ್ರೀಕ್,ಸಲ್ಸ,ಸ್ವೀಟ್ ಕಾರ್ನ್ ,ತ್ರಿ ಬೀನ್,ಬೇಬಿ ಮ್ಯಾರೊ,ಕೋಲ್ ಸ್ಲಾ.
ಇನ್ನು ಮಾಂಸಕ್ಕೆ ಸರಿ ಹೊಂದುವಂತಹ ಸಾಸ್ ಪಟ್ಟಿ ಹೇಗಿತ್ತೆಂದರೆ ಬೆಳ್ಳುಳ್ಳಿ,ಕುದುರೆ ಮೊಲಂಗಿ(horseradish)ಸೇಬು,ಮೆಣಸಿನಕಾಯಿ,ಮಿಂಟ್,ಕ್ರಾನ್ ಬೆರ್ರಿ...ಇದಲ್ಲದೆ ಇನ್ನು ಒಂದು ಸಾಸ್ ಇತ್ತು..ಆ ಸಾಸ್ ಹೆಸ್ರು ಭಲೇ ಮಜವಾಗಿತ್ತು.."ಚಕಲಕ ಸಾಸ್" ...ಸಖತ್ತಾಗಿದೆ ಅಲ್ವಾ ಹೆಸ್ರು....ಇದು ಅಫ್ರಿಕದಾ ಸಾಂಪ್ರದಾಯಿಕ ಸಾಸ್ ಅಂತೆ...ಜೊತೆಗೆ ಹುಳಿ ಮಿಶ್ರಿತ ಬೇಯಿಸಿದ ಬಿಸಿ ಆಲೂಗಡ್ದೆ ಕೂಡ ಸೈಡಲ್ಲಿ ಹಬೆಯಾಡುತಿತ್ತು.....ಆ ಸಾಸ್ ಹಾಗೂ ಸಲಾಡ್ ಹೀಗಿತ್ತು
ಈಗ ಊಟದ ಮುಖ್ಯ ಘಟ್ಟಕ್ಕೆ ಬರೋಣ ...ಅದೇ ಅರಣ್ಯ ರೋಧನ !!
ಇಲ್ಲಿ ದೊರೆಯುವ ಖಾದ್ಯಗಿಂತ ಮುಖ್ಯವಾಗಿ ಅದನ್ನು ಬಡಿಸುವ ರೀತಿ ಬಹು ಆಕರ್ಷಣೀಯವಾಗಿರುತ್ತದೆ.ದೊಡ್ಡ ದೊಡ್ಡ ಮಾಂಸದ ತುಂಡಿಗೆ ಕಾಡು ಜನರು ಉಪಯೋಗಿಸುವ ಕತ್ತಿ,ಈಟಿ ,ಭರ್ಜಿಗಳನ್ನು ಚುಚ್ಚಿ ದೊಡ್ಡ ವರ್ತುಲಾಕಾರದ ಗುಂಡಿಯ ಅಡಿಯಿಂದ ಉರಿಯುವ ಬೆಂಕಿಯ ಮೇಲೆ ಬೇಯಿಸುತ್ತಾರೆ.,,ಆ ಮಾಂಸವನ್ನು ಈಟಿಯ ಸಮೇತ ಬೆಂಕಿಯಿಂದ ತೆಗೆದು ಮೇಜಿನ ಬಳಿ ಬಂದು ನಮ್ಮ ಮುಂದಿರುವ ತಟ್ಟೆಯ ಮೇಲೆ ಈಟಿಯ ಒಂದು ಕೊನೆಯನ್ನು ಲಂಬವಾಗಿ ಇಟ್ಟು ಮಾಂಸದ ತುಂಡನ್ನು ನಮ್ಮ ತಟ್ಟೆಯ ಮೇಲೆ ಬೀಳುವಂತೆ ಸ್ವಲ್ಪವೇ ಕತ್ತರಿಸುತ್ತಾರೆ.ಅವರು ಕತ್ತರಿಸುವ ಸಮಯದಲ್ಲಿ ಆಗಷ್ಟೆ ಬೆಂಕಿಯಿಂದ ತೆಗೆದ ದೊಡ್ಡ ಮಾಂಸದ ತುಂಡು ಬಿಸಿ ಬಿಸಿ ಹೊಗೆ ಹೊರಗೆ ಹಾಕುತ್ತಿರುವುದು,ಅವರು ತಟ್ಟೆ ಮೇಲೆ ಇಟ್ಟು ಕತ್ತರಿಸುವ ಚಿತ್ರ ನೀವೆ ನೋಡಿ...
ಇದೇ ರೀತಿಯಾಗಿ ಎಲ್ಲಾ ಮಾಂಸವನ್ನು ಬಡಿಸುತ್ತಾರೆ,ನನಗೆ ಎಲ್ಲಾ ಪ್ರಾಣಿಗಳು ತುಂಬಾ ರುಚಿಯಾಗಿದ್ದವು ಅನ್ನಿಸಿತು,ಅದರಲ್ಲಿ ನನಗೆ ತುಂಬಾ ಇಷ್ಟ ಅಗಿದ್ದು ಎಂದರೆ "ಮೊಸಳೆ".....ಮೃಗಾಲಯದ ಕೊಳದಲ್ಲಿ ಯಾವಗಲೂ ಸೋಮಾರಿಯಾಗಿ ಮಲಗುವ ಈ ಮಕರ ಇಷ್ಟೊಂದು ರುಚಿಯಾಗಿರುತ್ತದೆ ಎಂದು ನನಗೆ ಅವತ್ತೆ ಗೊತ್ತಾಗಿದ್ದು...... ಎಲ್ಲಾ ಪ್ರಾಣಿಗಳ ಮಾಂಸವನ್ನು ಪ್ರೀತಿಯಿಂದ ತಿಂದು ಮುಗಿಸಿ,ಹೊಟ್ಟೆ ಭಾರವಾಗುವ ಸಮಯ ಹತ್ತಿರ ಬಂತು ಅನ್ನಿಸುತ್ತಿರುವಾಗಲೆ ಕೊನೇಲಿ ಬಂದ ಐಸ್ ಕ್ರೀಮ್ ಅಗ್ನಿ ಶಮನ ಮಾಡುವ ಮಳೆಯಂತೆ ನನ್ನ ಹೊಟ್ಟೆಯನ್ನು ಕೂಡ ತಂಪಾಗಿಸಿತು......
ಈಗ ಹೇಳಿ "ಮಾಂಸಹಾರಿಗಳಿಗೆ ಮಾತ್ರ" ಆನ್ನೋ ಟೈಟಲ್ ಇದಕ್ಕೆ ಒಪ್ಪುತ್ತಾ....??...ಒಪ್ಪಲ್ಲಾ ಅನ್ನೋದು ನಿಜ ಆದ್ರು ಸಸ್ಯಹಾರಿಗಳು ಕೂಡ ಇದನ್ನು ಓದಬಹುದು ತಾನೇ...........!!

Saturday, May 8, 2010
"ಯಂಗ್ ಗಾಂಧಿ"
ಗಾಂಧೀಜಿ ಅಂದಾಕ್ಷಣ ನಮಗೆ ನೆನಪಾಗೋದು ಏನ್ ಹೇಳಿ??
ಒಬ್ಬೊಬ್ರು ಒಂದೊಂದ್ ರೀತಿ ಉತ್ತರಿಸಬಹುದು..ಉದಾಹರಣೆಗೆ
ಇಸ್ಕೂಲ್ ಮಕ್ಳು -- ಅವ್ರು "ಫಾದರ್ ಆಫ್ ದ ನೇಷನ್" ಅಂತ ಕ್ಲಾಸಲ್ಲಿ ಓದಿದ್ದನ್ನ ಬಡಬಡಿಸಬಹುದು,ನೀವಿನ್ನು ಜಾಸ್ತಿ ಕೇಳುದ್ರೆ ಗಾಂಧಿ ತಾತ ಕೋಲ್ ಹಿಡ್ಕೂಂಡಿರೊದ್ರಿಂದನೇ ಕಾಗೆಗಳು ಅವರ ಪ್ರತಿಮೆ ಮೇಲೆ ಕೂರೊಲ್ಲ...ಅನ್ನೊ ಜೋಕ್ ಹೊಡಿತಾರೆ....
ಸರ್ಕಾರಿ ನೌಕರರು -- ಅಕ್ಟೋಬರ್ ೨ ,ಗಾಂಧಿ ಜಯಂತಿ ದಿನ ಸರ್ಕಾರಿ ರಜೆ ಅಂತ ಫುಲ್ ಖುಷಿಯಿಂದ ನಕ್ಕೊಂಡು ಹೇಳ್ತಾರೆ.
ಕುಡುಕರಿಗೆ ಕೇಳೋದೆ ಬೇಡ ಬಿಡಿ...ಗಾಂಧೀಜಿ ಹುಟ್ಟಿದ್ ದಿವಸ "ಎಣ್ಣೆ" ಸಿಗೊಲ್ಲ , ಬಾರ್ ಹಿಂದಿನ್ ಬಾಗಿಲಿನಿಂದ ಸಿಕ್ಕುದ್ರು ಡಬಲ್ ರೇಟ್ ಕೊಡ್ಬೇಕಲ್ಲ ಅಂತ ಸ್ವಲ್ಪ ಬೇಸರ ವ್ಯಕ್ತಪಡಿಸಬಹುದು.
ಇನ್ನು ನನಗೆ ಕೇಳುದ್ರೆ ೧೦,೨೦,೫೦,೧೦೦.೫೦೦ ರೂಪಾಯಿ ನೋಟಲ್ಲಿ ಬರೋ ಹಸನ್ಮುಖಿ ಗಾಂಧಿ ತಾತನ್ನ ನೆನಪು ಮಾಡ್ಕೊತಿನಿ.
ಆದ್ರೆ ಸಾಧಾರಾಣವಾಗಿ "ಗಾಂಧೀಜಿ" ಹೆಸರು ಕೇಳಿದಾಕ್ಷಣ ಮನಸ್ಸಿನಲ್ಲಿ ಮೊಡಿ ಬರೋ ಚಿತ್ರ ಅಂದ್ರೆ
ಕೈಯಲ್ಲಿ ಕೋಲು ,ಬಿಳಿ ಕಚ್ಚೆ ,ಮೈ ಸುತ್ತ ಶಾಲು ರೀತೀಲಿ ಹೊದ್ದುಕೊಂಡಿರುತಿದ್ದ ಬಿಳಿ ಬಟ್ಟೆ ,ಬಕ್ಕ ತಲೆ. ನಮ್ ದೇಶ ಅಲ್ಲದೆ ಜಗತ್ತಿನಾದ್ಯಂತ ಇಂದಿಗೂ ಕೋಲು ,ಶಾಲು,ಕಚ್ಚೆ ಹಾಕಿಕೊಂಡಿರುವ ಅನೇಕ ಗಾಂಧೀಜಿಯ ಪ್ರತಿಮೆಗಳು ಶಾಂತಿ ಹಾಗು ಅಹಿಂಸೆಯ ದ್ಯೋತಕವಾಗಿ ನಗುತ್ತಾ ನಿಂತಿವೆ.
ಇದಕ್ಕೆ ಒಂದ್ ಪ್ರತಿಮೆ ಮಾತ್ರ ವಿಭಿನ್ನವಾಗಿ ನಿಲ್ಲುತ್ತೆ....ಇದು ದಕ್ಷಿಣ ಆಫ್ರಿಕಾದ ವಾಣಿಜ್ಯ ರಾಜಧಾನಿ ಜೋಹಾನ್ಸಬರ್ಗ್ ನಲ್ಲಿರುವ
ಗಾಂಧೀಜಿ ಪ್ರತಿಮೆ....ನಾನು ೨೦೦೮ನೇ ಇಸವಿ ಸೆಪ್ಟೆಂಬರ್ ನಲ್ಲಿ ಜೋಹಾನ್ಸಬರ್ಗ್ ಗೇ ಕೆಲಸದ ನಿಮಿತ್ತ ಹೋಗಿದ್ದೆ,ಅದೊಂದು ವಾರಾಂತ್ಯದ ರಜಾದಿನ ನಾನು ನನ್ನ ಮಿತ್ರರೊಂದಿಗೆ ಸಿಟಿ ಸುತ್ತಾಡಿಕೊಂಡು ಬರೋಕೆ ತೆರಳಿದೆ ,ನಗರದ ಹೃದಯಭಾಗದಲ್ಲಿರುವ "ಹಿಲ್ ಬ್ರೋ ಟವರ್" ನೋಡ್ಕೊಂಡು, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸ್ಲಮ್ (ಕೊಳಚೆ ಪ್ರದೇಶ) "ಸೊವೇಟೊ" ಮೇಲೆ ಹಾದು,ದಕ್ಷಿಣ ಆಫ್ರಿಕಾದ " ವರ್ಲ್ಡ್ ಆಫ್ ಬೀರ‍್" ಮಧ್ಯ ಸಂಸ್ಕರಣಾ ಘಟಕದಲ್ಲಿ ಒಂದು ಸುತ್ತು ಹಾಕಿಕೊಂಡು ಹೊರಗೆ ಬರೊಷ್ಟರಲ್ಲಿ ಸೂರ್ಯ ಇನ್ನೇನು ಮುಳುಗೋ ಸಮಯ, ಬೆಳಿಗ್ಗೆಯಿಂದ ಸುತ್ತಾಡಿದ್ಕೊ ಏನೋ ಕಣ್ಣಿಗೆ ಮೆಲ್ಲನೆ ನಿದ್ದೆ ಮಂಪರಿಗೆ ಜಾರ‍್ತಾ ಇತ್ತು, ಅಗ ನಮ್ ಕಾರ್ ಡ್ರೈವರ್ ಕ್ರಿಸ್ " ದೇರ್ ಇಸ್ ಅ "ಗ್ಯಾಂಡಿ" ಸ್ಟಾಚು ನಿಯರ್ ಬೈ " ಅಂತ ಅವನ ಪಕ್ಕದಲ್ಲಿ ಕುಳಿತಿದ್ದ ಥಾಮಸ್ ಕಡೆ ತಿರುಗಿ ಹೇಳಿದನು.ನಾವಿದ್ದ ಗುಂಪಿನಲ್ಲಿ ನಾನು ಮತ್ತೆ ಥಾಮಸ್ ಮಾತ್ರ ಭಾರತೀಯರಾಗಿದ್ದೇವು,"ಗಾಂಧಿ"ಯನ್ನು ಆಫ್ರಿಕನ್ ಭಾಷಾ ಧಾಟೀಲಿ "ಗ್ಯಾಂಡಿ" ಅಂತ ಸಂಭೋಧಿಸಿದ್ದು ಥಾಮಸ್ ಗೇ ಆರ್ಥ ಆಗ್ಲಿಲ್ಲ ಅನ್ಸುತ್ತೆ...ನಾನು ಅವನು ಹೇಳಿದ್ದನ್ನು ಮತ್ತೆ ಕೆದಕಿ ಪ್ರಶ್ನಿಸಿದಾಗ ಆ ಸ್ಟಾಚು ನಮ್ಮ ಗಾಂಧಿ ತಾತನೇ ಎಂದು ಖಾತ್ರಿ ಆಯಿತು,ಸರಿ ಅಲ್ಲಿಗೆ ಗಾಡಿ ತಿರುಗಿಸು ಕ್ರಿಸ್ ಅಂತ ಹೇಳಿದಾಗಲೇ ಕೋಲ್ ಹಿಡ್ಕೊಂಡಿರೊ ಅಜ್ಜನ ಚಿತ್ರ ಮನಸ್ಸಿನಲ್ಲಿ ಚಿತ್ತಾರವಾಗಿ ಚಿತ್ರಿಸಿ ಆಗಿತ್ತು .ಕಾರು ನಗರದ ಹೃದಯ ಭಾಗ ಅಂದ್ರೆ ಡೌನ್ ಟೌನ್ ಅಂತ ಕರೆಯೊ ಜಾಗದಲ್ಲಿ ನಾಲ್ಕೈದು ಶಿಸ್ತು ಬದ್ದವಾದ ಸಂಚಾರಿ ದೀಪವನ್ನು ದಾಟಿ "ಗಾಂಧಿ ಸ್ಕ್ವೆರ್" ಒಳಗೆ ಬಂತು, ಗಾಂಧಿ ಪ್ರತಿಮೆ ಇರೊ ಸುತ್ತಮುತ್ತಲಿನ ಪ್ರದೇಶಕ್ಕೆ "ಗಾಂಧಿ ಸ್ಕ್ವೆರ್" ಎಂದು ನಾಮಕರಣ ಮಾಡಿದ್ದಾರೆ.
ಕಾರಿನ ಕಿಟಕಿಯಿಂದಲೇ ಪ್ರತಿಮೆಯ ಪ್ರಥಮ ದರ್ಶನವಾದಾಗ ಸ್ವಲ್ಪ ಕನ್ ಫ್ಯುಸ್ ಆಗಿದ್ದೊಂತು ನಿಜ,ಕೆಳಗಿಳಿದು ಪ್ರತಿಮೆಯ ಹತ್ತಿರ ಬಂದಾಗಲೆ ತಿಳಿದಿದ್ದು ಅವರು "ಗಾಂಧೀಜಿ " ಎಂದು,ಈ ಪುತ್ತಳಿ ಸಂಪೂರ್ಣ ಭಿನ್ನವಾಗಿತ್ತು,ಸಾಂಪ್ರಾದಾಯಿಕವಾದ ಕೋಲು,ಕಚ್ಚೆ ಪಂಚೆ ಅಲ್ಲಿ ಇರಲಿಲ್ಲ,ಬ್ರಿಟಿಷರ ವಿರುದ್ಧ ಮುನ್ನುಗ್ಗುವ ಉತ್ಸಾಹದಲ್ಲಿ ಯಾವಾಗಲೂ ಮುಂದಿರುತಿದ್ದ ಬಲಗಾಲು ಎಡಗಾಲಿಗೆ ಸಮವಾಗಿತ್ತು ,ಕಣ್ಣಿಗೆ ಕನ್ನಡಕ ಇರಲಿಲ್ಲ,ತಲೆಯ ಮೇಲೆ ಸೊಂಪಾಗಿ ಬೆಳೆದಿದ್ದ ಕೇಶರಾಶಿಗೆ ಬಲದಿಂದ ಕ್ರಾಪ್ ಕೂಡ ತೆಗೆಯಲಾಗಿದೆ, ಕಪ್ಪು ಕೋಟ್ ಕಪ್ಪು ಪ್ಯಾಂಟ್ ಸಹಿತ ವಕೀಲರ ಗೌನ್ ಅವರ್ ಮೈ ಸುತ್ತುವರೆದೆತ್ತು,ಎಡಗೈಯಿಂದ ಒಂದು ಪುಸ್ತಕವನ್ನು ಎದೆಗವುಚಲಾಗಿತ್ತು.
ನನಗೆ ಆಗಲೆ ತಿಳಿದಿದ್ದು ಇದು ಗಾಂಧೀಜಿಯವರು ಹದಿಹರೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ "ಯಂಗ್ ಗಾಂಧಿ " ಎಂದು. ನಮ್ ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಹೆಸರಿನ ರಸ್ತೆ ಏನೋ ಇದೆ, ಆದ್ರೆ ಗಾಂಧಿ ಕಂಡ ಕನಸಿನ ರಾಮರಾಜ್ಯ ಅಲ್ಲಿ ನನಸಾಗೋದು ಕಷ್ಟ ಬಿಡಿ,ಅದಕ್ಕೆ ಆ ರಸ್ತೆಯ ಖದರ್ರಿಗೆ ,ಆ ಹೆಸ್ರಿಗೆ ಈ ರೀತಿ "ಯಂಗ್ ಗಾಂಧಿ" ಪ್ರತಿಮೆ
ಪ್ರತಿಷ್ಟಾಪಿಸಿದರೆ ಸ್ವಲ್ಪ ಅನುರೂಪವಾಗಿರುತ್ತೆ ಅಂತ ಅನ್ಸುತ್ತೆ ಅಲ್ವಾ....??

Subscribe to:
Posts (Atom)