Sunday, May 30, 2010
ವಿಚಿತ್ರ"ವಾದ"
ಕೆಲವು ವಿಚಾರಗಳು ವ್ಯಕ್ತಿಗತವಾಗಿ ಅನುಭವಿಸಿದಾಗ ಮಾತ್ರ ಅದನ್ನು ಅನುಭವ ಎನ್ನಲು ಸಾಧ್ಯ.ಇಂಗ್ಲೀಷಲ್ಲಿ ಹೇಳುವ ಹಾಗೆ "Experience can only be Experienced".ನಾವು ಯಾವುದಾದರು ವಿಷಯವನ್ನು ಪತ್ರಿಕೆಯಲ್ಲಿ ಓದಿದಾಗ,ವಾರ್ತೆಗಳಲ್ಲಿ ವೀಕ್ಷಿಸಿದಾಗ ಅಥವಾ ಕೇಳಿದಾಗ ಆ ವಿಚಾರದ ಗಾಢತೆಯ ಅರಿವಾಗುವುದು ಬಹಳಷ್ಟು ಕಡಿಮೆ.ಪ್ರತ್ಯಕ್ಷವಾಗಿ ಕಂಡಾಗ ಮಾತ್ರ ಅದರ ಆಳ - ಅಗಲದ ವಿಸ್ತಾರ ಮನದಟ್ಟಾಗುವುದು.
ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಸಮುದ್ರದಾಳದಲ್ಲಿ ಇಳಿದು ಮೀನನ್ನು ನಾಚಿಸುವ ಹಾಗೆ ಈಜುವುದು ,ಬಾನೆತ್ತರದಲ್ಲಿ ಹಾರುತ್ತಿರುವ ಹೆಲಿಕಾಪ್ಟರಿನಿಂದ ಬೆನ್ನಿಗೆ ಪ್ಯಾರಾಚೂಟ್ ಕಟ್ಟಿಕೊಂಡು ಒಂದೇ ಉಸಿರಿಗೆ ಜಿಗಿಯುವುದು,ಕೊರೆಯುವ ಚಳಿಯಲ್ಲಿ ಹಿಮಚ್ಛಾದಿತ ಪರ್ವತವನ್ನೇರಿ ಪ್ರಪಂಚವನ್ನೆ ಗೆದ್ದೆ ಎಂಬ ರೀತಿಯಲ್ಲಿ ಬೀಗುವುದನ್ನು ನೋಡಿದವರಿಗೆ ಆ ಜಾಗದಲ್ಲಿ ನಾನಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸದೆ ಇರಲಾರದು . ಜೀವನದ ಇಂತಹ ಅದಮ್ಯ ಅಪರೂಪವಾದ ರೋಮಾಂಚನಕಾರಿ ಕ್ಷಣಗಳಿಗೆ ಮೂಕಪ್ರೇಕ್ಷಕರಾಗದೆ ನನ್ನ ಪಾಲು ಕೂಡ ಇರಲಿ ಎಂದು ಇಚ್ಛಿಸುವಲ್ಲಿ ನಾನು ಕೂಡ ಒಬ್ಬ.
ಇಷ್ಟೆಲ್ಲಾ ಸಂತೋಷ,ಸಂಭ್ರಮದ ಕ್ಷಣಗಳ ನಡುವೆ ಬದುಕಿನ ಮತ್ತೊಂದು ಮಗ್ಗುಲಿನಲ್ಲಿ ಗುಪ್ತಾಗಿ ಅಡಗಿರುವ ಭಯ,ಆತಂಕದ ಕರಾಳ ಛಾಯೆಯ ದಿಗ್ದರ್ಶನ ಎಲ್ಲರಿಗೂ ಬೇಡವಾದದ್ದು, ಬೇಡವೆಂದು ಕೈ ಮುಗಿದು ಕೇಳಿಕೊಂಡರು ಬರದೇ ಇರುವುದಕ್ಕೆ ಅದೇನು ಮಾನವ ಪ್ರೇರಿತವೆ??
ಹೀಗೆ ನೀವು ಹಲವು ಬಾರಿ ಕೊಲೆ,ದರೋಡೆ ,ಆತ್ಮಹತ್ಯೆ , ಭಯೋತ್ಪಾದಕ ದುಷ್ಕೃತ್ಯಗಳ ಕುರಿತ ವಿಸ್ತೃತ ವರದಿಗಳನ್ನು ಟಿ.ವಿ ಯಲ್ಲಿ ವೀಕ್ಷಿಸಿರುತ್ತೀರಿ,ಸಾವಿಗೆ ಶರಣಾದ ಜೀವಗಳ ಬಗ್ಗೆ ಸಂತಾಪ ಮಾತುಗಳು ,ಅನುಕಂಪದ ನಿಟ್ಟುಸಿರು ಬಿಟ್ಟು ಸ್ಪಂದಿಸಿರುತ್ತೀರಿ, ಆದರೆ ಈಗ ನಿಮ್ಮನ್ನು ನೀವು ಆ ಜಾಗದಲ್ಲಿ ಕಲ್ಪಿಸಿಕೊಳ್ಳುವುದಿಲ್ಲ , ರಿಮೋಟ್ ಗುಂಡಿಯನ್ನು ಒತ್ತಿ ಬೇರೆ ಚಾನಲ್ ಗೆ ಹೋಗುವುದರ ಮೂಲಕ ಆ ವಿಷಯಕ್ಕೆ ಅಲ್ಲಿ ಇತಿಶ್ರೀ ಹಾಡಲಾಗುತ್ತದೆ ,ಮನಸ್ಸೆಂಬ ಮರ್ಕಟ ಇಲ್ಲಿ ಬೆರಳ ತುದಿಯಿಂದ ಬೇರೆ ಜಗತ್ತಿಗೆ ತಮ್ಮ ಮನಸ್ಸನ್ನು ಕೊಂಡೊಯ್ಯುತ್ತದೆ...""Life is very easy"" ಅಂತ ಅನ್ನಿಸೋದು ಆ ಕ್ಷಣದಲ್ಲಿ ಮಾತ್ರ.
ಈಗ ಸ್ವಲ್ಪ ಹಿಂದಕ್ಕೆ ಹೋಗೋಣ ,ಟಿವಿಯಲ್ಲಿ ಕಂಡ ಬಲಿಪಶುಗಳು ತಮ್ಮ ಸಾವು ಹತ್ತಿರ ಬಂದ ಸಮಯದಲ್ಲಿ ಕಂಡ ಕ್ಷಣವನ್ನು ನೀವು ಯಾವ ಸಮಯದಲ್ಲಾದರೂ ಊಹಿಸಿದ್ದೀರಾ...ಅವರ ಬದಲು ನೀವೆ ಅಲ್ಲಿದ್ದಿದ್ದರೆ ಹೇಗಾಗುತ್ತಿತ್ತು ...ಇದನ್ನು ಕಲ್ಪಿಸಿಕೊಂಡಾಗ ನಿಮಗೆ ಆಗುವ ಅನುಭವ ಅನುಭವಿಸದವರಿಗಿಂತ ಕೊಂಚ ಕಮ್ಮಿ ...ಏಕೆಂದರೆ ನಿಮ್ಮದು ಕಲ್ಪನೆ.....ಇಂತಹ ಚಿತ್ರ ವಿಚಿತ್ರ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಚಿಕ್ಕ ದೊಡ್ಡ ಪಾತ್ರಧಾರಿಯಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಗಮಿಸಿರುತ್ತದೆ,ಕೆಲವು ಹೇಗಿರುತ್ತೆಂದರೆ...
ಇತ್ತೀಚಿಗಷ್ಟೇ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿನ ಬಾಯಿಂದ ತಪ್ಪಿಸಿಕೊಂಡವರಿಗೆ ಇದರ ಅರಿವು ಭಯಾನಕವಾಗಿರುತ್ತದೆ,,,
ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅಥವಾ ಯಾವುದೇ ಅಮಾನುಷ ದಾಳಿಯಲ್ಲಿ ಕೂದಲೆಳೆಯಿಂದ ಬಚಾವಾದ ಅನೇಕರಿಗೆ ಇಂದಿಗೂ ಅದರ ನೆನಪು ಕರಾಳ....
ಬೆಂಕಿ ಹತ್ತಿಕೊಂಡ ಬಹು ಮಹಡಿ ಕಟ್ಟಡದಿಂದ ಜೀವ ಉಳಿಸಿಕೊಳ್ಳಲು ಹಾರಿದ ದುರ್ಧೈವಿಗಳಿಗೆ ಕನಸಿನಲ್ಲೂ ಬೆಂಕಿಯ ಜ್ವಾಲೆ ಮೈ ಸುತ್ತ ಆವರಿಸಿರುತ್ತದೆ....
ರಸ್ತೆ ಅಫಘಾತದಲ್ಲಿ ಮಾರಣಂತಿಕವಾಗಿ ಪೆಟ್ಟು ತಿಂದ ಬಳಿಕವು ಅಸ್ಪತ್ರೆಯಲ್ಲಿ ಜೀವದಾನ ದಕ್ಕಿಸಿಕೊಂಡವರಿಗೆ ಸಾವಿನ ದರ್ಶನ ಅತಿ ಸಮೀಪದ್ದು....
ಈಜಿ ಮೈ ಹಗುರ ಮಾಡಿಕೊಳ್ಳಲೆಂದು ನೀರಿಗೆ ಇಳಿದವ ಅಕಸ್ಮಾತ್ ಸುಳಿಯಲ್ಲಿ ಸಿಲುಕಿ ಬದುಕುಳಿದವನಿಗೆ ಕುಡಿಯುವ ನೀರಿನಲ್ಲಿ ಕೂಡ ಸಾವಿನ ಪ್ರತಿಬಿಂಬ ಗೋಚರಿಸುವುದು....
ಹುಟ್ಟು ಕೇವಲ ಒಂದೇ ರೀತಿ,ಸಾವು ವಿಧ ವಿವಿಧ ..ಇದು ನಿರಾಶಾವಾದ ಎಂದು ತಿಳಿದುಕೊಳ್ಳಬೇಡಿ...ಆಶಾವಾದದ ಸುಪ್ತ ಜೀವಾಳದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹುದುಗಿರುವ ಚಿಕ್ಕ ವಿಚಿತ್ರ ಕುತೂಹಲ ಎಂದರೆ ತಪ್ಪಾಗಲಾರದು..ಕುತೂಹಲಕ್ಕೆ ಮನಸ್ಸನ್ನು ಪರಿಚಯ ಮಾಡಿಕೊಡಿ, ಎಂದಾದರು ಒಂದು ದಿನ ನಿಮ್ಮನ್ನು ನೀವು ಮೇಲಿನ ಯಾವುದಾದರೂ ಒಂದು ಪಾತ್ರಧಾರಿಯಾಗಿ ಊಹಿಸಿಕೊಳ್ಳಿ ಆಗ ಬದುಕಿನ ತೀವ್ರತೆಗೆ ಮತ್ತೊಂದು ಆಯಾಮ ಸಿಗುವುದು ಖಚಿತ,ಜೀವನದ ಬೆಲೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ...ದೇಹ ನೆಪ ಮಾತ್ರ..ಚೈತನ್ಯ ಭರಿತ ಜೀವನವನ್ನು ಆರಾಧಿಸಿ, ಆದರಿಸಿ, ಆಲಂಗಿಸಿ,ಆಸ್ವಾಧಿಸಿ,.....
Subscribe to:
Post Comments (Atom)
0 comments:
Post a Comment