Monday, May 10, 2010
ಇಡ್ಲಿ ಇತಿಹಾಸ
ಇಡ್ಲಿ ಅಂದ್ರೆ ಯಾರಿಗೆ ಇಷ್ಟ ಅಗೋಲ್ಲ ಹೇಳಿ...ಆಡೋ ಮಕ್ಕಳಿಂದ ಹಿಡಿದು ಅಲ್ಲಾಡೊ ಮುದುಕರವರೆಗೂ ಬೆಳಿಗ್ಗೆ ,ಮಧ್ಯಾಹ್ನ ,ರಾತ್ರಿ ಅನ್ನೊ ನಿರ್ದಿಷ್ಟ ಸಮಯದ ಅರಿವನ್ನು ಮರೆತು ತಿನ್ನಬಹುದಾದಂತಹ ಪೌಷ್ಠಿಕ ಹಾಗೂ ರುಚಿಕಟ್ಟಾದ ಆಹಾರ.ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿ ಸೂಜಿ ಚುಚ್ಚುಸ್ಕೊಂಡು ಮಾತ್ರೆ ಬರೆಸ್ಕೊಂಡು ಮನೆಗೆ ಬಂದಾದ್ ಮೇಲೆ ಅಯ್ಯೊ ,ಡಾಕ್ಟರ್ ಹತ್ರ ಏನ್ ತಿನ್ನಬಹುದು ಅಂತ ಕೇಳೊದ್ನ ಮರೆತು ಬಿಟ್ನಲ್ಲ ಅಂತ ಯಾರಾದ್ರು ಹೇಳುದ್ರೆ ,ಮರುಕ್ಷಣವೇ ಅವರು ಚಿಂತೆ ಮಾಡದೆ ತಿನ್ನೋದೆ ಇಡ್ಲಿ.ನಾನ್ ಚಿಕ್ಕವನಾಗಿದ್ದಾಗ ಮನೇಲಿ ನಾಳೆ ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡ್ತಾರೆ ಅಂತ ಗೊತ್ತದ್ರೆ ಸಾಕು,ರಾತ್ರಿಯಲ್ಲಾ ಕನಸಲ್ಲು ಇಡ್ಲಿನೇ,ಯಾವಾಗಪ್ಪ ಬೆಳಿಗ್ಗೆ ಆಗುತ್ತೆ ಅಂತ ಚಾತಕ ಪಕ್ಷಿ ತರ ಕಾಯ್ತಾ ಇರ್ತಿದ್ದೆ,
ಉತ್ತರ ಭಾರತದ ಕಡೆ ಇಡ್ಲಿ ಮಾಡ್ತಾರೆ ಆದ್ರೆ ದಕ್ಷಿಣ ಭಾರತದಲ್ಲಿ ಮಾಡಿದಷ್ಟು ಖದರ್ ಇರೋಲ್ಲ..ಅದಕ್ಕೆ ತಕ್ಕ ರೀತಿಯ ರುಚಿಯಾದ ಸಾಂಬಾರ್ ಕೂಡ ಇರಬೇಕು,ಇಡ್ಲಿ ಕಾಲಕ್ಕೆ ತಕ್ಕಂತೆ ಹೆಸರು,ವಿವಿಧ ಪ್ರದೇಶಕ್ಕೆ ತಕ್ಕಂತೆ ಆಕಾರ,ರುಚಿ ಬದಲಾಯಿಸಿಕೊಂಡಿದೆ ಎಂದರೆ ತಪ್ಪಾಗಲಾರದು.ಬಿಬಿಸಿ ವಾರ್ತೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಇಡ್ಲಿಯು "ಜಗತ್ತಿನ ಹತ್ತು ಅದ್ಭುತ ಉಪಹಾರಗಳಲ್ಲಿ " ಒಂದೆನಿಸಿಕೊಂಡಿದೆ. ಹೌದು ...ನಿಮಗೆ ಇಡ್ಲಿ ಎಲ್ಲಿಂದ ,ಹೇಗೆ ,ಯಾವಗ ಬಂತು ಅಂತ ಗೊತ್ತಾ..??
ಇಡ್ಲಿಯ ಇತಿಹಾಸದ ಬಗ್ಗೆ ಇಲ್ಲೊಂದು ಕಿರು ಮಾಹಿತಿ.
ಇತಿಹಾಸ ಇಡ್ಲಿದು ಅಗಿರಲಿ,ಇಂಡಿಯಾದೆ ಅಗಿರಲಿ...ಇತಿಹಾಸ ಅಂದಮೇಲೆ ವಿವಾದ,ಗೊಂದಲ,ಊಹಾಪೋಹ ಇದ್ದೇ ಇರುತ್ತದೆ.ಆದ್ರೆ ನಾನಿಲ್ಲಿ ಕೆಲವು ಒಪ್ಪಬೇಕಾದ ಮಾಹಿತಿಯ ಆಧಾರದ ಮೇಲೆ ಅರ್ಥೈಸುವುದಕ್ಕೆ ಪ್ರಯತ್ನಿಸುತ್ತೀನಿ.
ಕ್ರಿಸ್ತ ಶಕ 920ರಲ್ಲಿ ಕನ್ನಡದ ಮೊದಲ ಕೃತಿಯನಿಸಿಕೊಂಡಿರುವ "ವಡ್ದಾರಾಧನೆ" ಯಲ್ಲಿ ಶಿವಕೊಟ್ಯಾಚಾರ್ಯರು "ಇಡ್ಡಲಿಗೆ" ಅನ್ನುವ ಶಬ್ಧವನ್ನು ಉಪಯೋಗಿಸಿರುತ್ತಾರೆ, ನಂತರ ಕ್ರಿಸ್ತ ಶಕ 1025 ""ಎರಡನೇ ಚಾವುಂಡರಾಯ "" ತನ್ನ ""ಲೋಕೊಪಕಾರ"" ಕೃತಿಯಲ್ಲಿ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಮೇಲೆ ಅದನ್ನು ,ಮೊಸರು ಹಾಗೂ ಕಾಳು ಮೆಣಸಿನ ಸಹಿತ ರುಬ್ಬಿ ತಯಾರಿಸುವ ಪದಾರ್ಥದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರಿಸ್ತ ಶಕ 1130 ರಲ್ಲಿ ಸಂಸ್ಕೃತದಲ್ಲಿ ಕರುನಾಡನ್ನು ಆಳಿದ ದೊರೆ ಹಾಗೂ ಸ್ವತಃ ವಿದ್ವಾಂಸನಾಗಿದ್ದ ಮೊರನೇ ಸೋಮೇಶ್ವರ ಬಲ್ಲಾಳನಿಂದ ವಿರಚಿತ "ಮಾನಸೋಲ್ಲಾಸ" ದಲ್ಲಿ "ಇಡ್ಡರಿಕಾ" ಎಂಬ ಪದದ ಪ್ರಯೋಗವಾಗಿದೆ. ಈ ಕೃತಿಗಳಲ್ಲಿ ಕಂಡು ಬರುವ ಹಳಗನ್ನಡ ಪದಗಳಲ್ಲಿ ಕೆಲವು ಕರಾವಳಿಯ "ತುಳು " ಭಾಷೆಯಲ್ಲಿ ಇಂದಿಗೂ ಪ್ರಚಲಿತ.ಇಡ್ಲಿಯನ್ನು ಬೇಯಿಸುವುದಕ್ಕೆ ಬೇಕಾಗಿರುವುದು ಹಬೆ..ಇವಾಗೇನೋ ಸಾಕಷ್ಟು ರೀತಿಯ "ಇಡ್ಲಿ ಕುಕ್ಕರ್ " ಗಳು ಲಭ್ಯ...ಆದರೆ ಹಿಂದಿನ ಕಾಲದಲ್ಲಿ ಪಾತ್ರೆಯನ್ನು ಬಟ್ಟೆ ,ಬಾಳೆ ಅಥವಾ ಬೇರೆ ಎಲೆಗಳಿಂದ ಮುಚ್ಚಿ ಹಬೆಯನ್ನು ತಡೆ ಹಿಡಿಯಲಾಗುತ್ತಿತ್ತು.ಈಗಲೂ ಕೂಡ ಬಾಳೆ ಎಲೆಗಳಿಂದ ಸುತ್ತಿ ಹಬೆಯಲ್ಲಿ ಬೇಯಿಸುವ ಹಲವು ಖಾದ್ಯಗಳು ಸಿಗುವುದುಂಟು.
"ಮುಡೆ"" ಎಂಬ ಈ ತಿನಿಸು ಇಡ್ಲಿಯ ರೀತಿಯೇ ಮಾಡುವುದು ಆದರೆ ಆಕಾರ ಬೇರೆ ,ಅದನ್ನು ಸುತ್ತಿರುವ ಎಲೆಯನ್ನು ಚಿತ್ರದಲ್ಲಿ ನೀವು ಕಾಣಬಹುದು,
ಭಾರತೀಯ ಆಹಾರ ಹಾಗೂ ಆಹಾರ ಪದ್ದತಿಯ ಕುರಿತು ಅಧ್ಯಯನ ನಡೆಸಿರುವ " ಕೆ.ಟಿ. ಅಚಯ್ಯ" ಎಂಬ ಸಂಶೋಧಕನ ಪ್ರಕಾರ ಇಡ್ಲಿ ತಯಾರಿಸುವ ವಿಧಾನವನ್ನೇ ಹೋಲುವ ಕೆಲವು ಪದಾರ್ಥಗಳು ಇಂಡೋನೇಷ್ಯಾದಲ್ಲಿ ಕ್ರಿಸ್ತ ಶಕ ೧೨೫೦ ರಿಂದಲೇ ಚಾಲ್ತಿಯಲ್ಲಿದೆ.ಆದರೆ ನಮ್ಮ ಹಳಗನ್ನಡದ ಪುರಾವೆಗಳ ಪ್ರಕಾರ ಇಂಡೋನೇಷ್ಯಾಕ್ಕಿಂತ ಮೊದಲು ಕರ್ನಾಟಕದಲ್ಲಿ ಶುರುವಾಗಿತ್ತೆಂಬ ಸ್ಪಷ್ಟ ನಿಲುವಿಗೆ ಬರಬಹುದು,
ಇವಿಷ್ಟು ಸಾಮಾನ್ಯ ಇಡ್ಲಿ ಬಗ್ಗೆಯ ಇತಿಹಾಸವಾದರೆ,ರವೆ ಇಡ್ಲಿ ಮಾತ್ರ ಕರ್ನಾಟಕ ಬಿಟ್ರೆ ಪ್ರಪಂಚದ ಯಾವುದೇ ಭಾಗದ ಜನರು
ಅದು ಅವರದ್ದು ಅಂತ ವಾದ ಮಾಡೋಕೆ ಅಗೋಲ್ಲ,ರವೆ ಇಡ್ಲಿ ಅಪ್ಪಟ ಕನ್ನಡ ನಾಡಿನದು. ಪ್ರಪಂಚ ಎರಡನೆ ಮಹಾ ಯುಧ್ದದ ವೇಳೆ ಅಕ್ಕಿ ಸಿಗುವುದು ದುಸ್ತರವಾದಾಗ "ಮಾವಳ್ಳಿ ಟಿಫನ್ ರೂಮ್"" ರವರು ಅಕ್ಕಿಯ ಬದಲಿಗೆ ರವೆಯನ್ನು ಉಪಯೋಗಿಸಿ ಮಾಡಿದ ಪ್ರಯೋಗವೆ ಕನ್ನಡಿಗರ ಹೆಮ್ಮೆಯ "ರವೆ ಇಡ್ಲಿ". ದಯವಿಟ್ಟು ಇದನ್ನು "ರವಾ ಇಡ್ಲಿ " ಎನ್ನಬೇಡಿ ,ಅಚ್ಚ ಕನ್ನಡದಲ್ಲಿ "ರವೆ ಇಡ್ಲಿ " ಎಂದು ಕರೆಯಿರಿ.
ಮಲ್ಲಿಗೆ ಇಡ್ಲಿ ಅಂತ ಇತ್ತೀಚೆಗೆ ಮಲ್ಲಿಗೆಯಷ್ಟೇ ಮೃದುವಾಗಿರೋ ಇಡ್ಲಿ
ಆಕಾರದಲ್ಲಿ ವಿವಿಧತೆಯಿರುವ ಇಡ್ಲಿಯ ಚಿತ್ರಗಳನ್ನು ಇಲ್ಲಿ ನೋಡಬಹುದು.
ಕರ್ನಾಟಕದ ಕರಾವಳಿಯ ಕಡೆ ಸಿಗುವ ಇಡ್ಲಿ.
ತಟ್ಟೆ ಆಕಾರದಲ್ಲಿ ಸಿಗುವ ತಟ್ಟೆ ಇಡ್ಲಿ.
ಕಾಂಚೀಪುರಂ ನಲ್ಲಿ ಸಿಗುವ ಲೋಟದ ಆಕಾರದ ಇಡ್ಲಿ.
ಚಿಕ್ಕ ಚಿಕ್ಕ ಇಡ್ಲಿಯನ್ನು ತಯಾರಿಸಿದ ನಂತರ ಮೊಸರಿನಲ್ಲಿ ಕೆಲ ಕಾಲ ನೆನೆಸಿಟ್ಟು ತಿನ್ನುವ "ಮೊಸರು ಇಡ್ಲಿ"
Subscribe to:
Post Comments (Atom)
0 comments:
Post a Comment