ಶೀರ್ಷಿಕೆ ಹೇಳೊ ಪ್ರಕಾರ ಈ ಅಂಕಣ ಮಾಂಸಾಹಾರಿಗಳಿಗೆ ಮಾತ್ರ ಅನ್ನೋದು ನಿಜ ಆದ್ರು ಸಸ್ಯಹಾರಿಗಳು ಓದುದ್ರೆ ತಪ್ಪೇನಿಲ್ಲ ಬಿಡಿ!!....ಮತ್ತೆ "ಮಾಂಸಹಾರಿಗಳಿಗೆ ಮಾತ್ರ!!" ಅನ್ನೋ ಶೀರ್ಷಿಕೆ ಯಾಕಪ್ಪ ಅಂತ ನಿಮಗೆ ಈ ಅಂಕಣದ ಕೊನೇಲಿ ಗೊತ್ತಾಗುತ್ತೆ.
ನಮ್ಮ ಕರ್ನಾಟಕದ ಯಾವುದೇ ಮೊಲೆಗೆ ಹೋದ್ರು ನಿಮಗೆ ಇಡ್ಲಿ,ವಡೆ,ಅವಲಕ್ಕಿ,ದೋಸೆ,ಬಿಸಿ ಬೇಳೆ ಬಾತ್,ಪೊಂಗಲ್,ಉಪ್ಪಿಟ್ಟು,ಕೇಸರಿಬಾತ್ ಇತ್ಯಾದಿ ಇತ್ಯಾದಿ ಸಿಕ್ಕೆ ಸಿಗುತ್ತೆ,ಇವಿಷ್ಟು ಸಸ್ಯಾಹಾರದಲ್ಲಿ ಸಿಗೋ ತಿಂಡಿ ಪದಾರ್ಥಗಳು ಅಂತ ಎಲ್ಲರಿಗೂ ಗೊತ್ತಿರೊ ವಿಷಯ,ಇನ್ನು ಕೆಂಪು ತರಕಾರಿ( ಮಾಂಸ) ಬಗ್ಗೆ ಹೇಳಬೇಕೆಂದ್ರೆ ತಮ್ಮ ತಮ್ಮ ಧರ್ಮಕ್ಕೆ ಅನುಸಾರವಾದ ಚೌಕಟ್ಟಿನಲ್ಲಿ ಏನೇನ್ ತಿನ್ನಬಹುದೋ ಎಲ್ಲಾ ಸಿಗುತ್ತೆ, ನೀವೇನಾದ್ರು ಕನ್ನಡದ "ಮುಂಗಾರಿನ ಮಿಂಚು" ಫಿಲ್ಮ್ ನೋಡಿದ್ರೆ ಇನ್ನ ಬೇರೆ ಬೇರೆ ಪ್ರಾಣಿಗಳಿಂದ ಮಲೆನಾಡಿನಲ್ಲಿ ಏನೆಲ್ಲಾ ಖಾದ್ಯಗಳನ್ನ ಮಾಡ್ತಾರೆ ಅನ್ನೋದು ಪರಿಚಯ ಅಗಿರುತ್ತೆ ..ಮೃಗಾಲಯದಲ್ಲಿ,ಡಿಸ್ಕವರಿ ಚಾನಲ್ ನಲ್ಲಿ, ಕಾಣ ಸಿಗುವಂತಹ ಪ್ರಾಣಿಗಳು ರಾತ್ರಿ ಊಟಕ್ಕೆ ನಿಮ್ ತಟ್ಟೆಗಳಲ್ಲಿ ಫ್ರೈ ಆಗಿ ಸಿಕ್ ಬಿಟ್ರೆ!!!!!!!!
ಸಿಗುತ್ತೆ ರೀ,....ಯಾಕ್ ಸಿಗೊಲ್ಲ...?? ಸಿಹಿ ಸುದ್ದಿ ಏನಂದ್ರೆ ಅ ತರಹದ ಮಾಂಸಗಳೆಲ್ಲಾ ದೊರೆಯುವ ಹೋಟ್ಲು ಇದೆ.....ಕಹಿ ಸುದ್ದಿ ಅಂದ್ರೆ ಅದು ನಮ್ ದೇಶದಲ್ಲಿ ಇಲ್ಲ....ಅದಿರೋದು ದಕ್ಷಿಣ ಆಫ್ರಿಕಾದ ಜೋಹಾನ್ಸಬರ್ಗ್ ನಲ್ಲಿ....ನಾನು ಅಲ್ಲಿಗೆ ಹೋದಾಗ ನಾನು ಕಂಡದ್ದು,ಕುಡಿದದ್ದು,ತಿಂದಿದ್ದು,ತೇಗಿದ್ದರ ಬಗ್ಗೆ ಅನುಭವದ ಒಂದು ಚಿಕ್ಕ ಬುತ್ತಿ.
ಅವತ್ತು ಶುಕ್ರವಾರ....ಸಂಜೆ ೩ ಘಂಟೆಗೆ ಆಫೀಸ್ ಮುಗಿಯುವಷ್ಟರಲ್ಲಿತ್ತು ,ಅಂತ ಏನು ಕಡಿದು ಎತ್ತಿ ಹಾಕೋ ಕೆಲಸನು ಇರ್ಲಿಲ್ಲ ಅದಕ್ಕೆ ಬೇಗ ಎಸ್ಕೇಪ್ ಆದೆ,.ಅಷ್ಟರಲ್ಲಿ ಆಫೀಸ್ ಹೊರಗೆ ನನ್ ಫ್ರೆಂಡ್ಸ್ ಸಂಜೆ ಏನ್ ಮಾಡೋದು ಅಂತ ಪ್ಲಾನ್ ಹಾಕ್ತಾ ಇದ್ರು ,ಆ ಕ್ಷಣದಲ್ಲಿ ಏನು ನಿರ್ಧಾರ ಆಗ್ಲಿಲ್ಲ ಅದಕ್ಕೆ ರೂಮ್ ಕಡೇ ಹೋಗಿ ಫ್ರೆಶ್ ಆಗಿ ವಾಪಸ್ ಬಂದು ಟೆನ್ನಿಸ್ ಆಡ್ತಾ ಇದ್ವಿ,ಅಷ್ಟರಲ್ಲಿ ಎಂದಿನಂತೆ ನಮ್ ಡ್ರೈವರ್ ಕ್ರಿಸ್ ಬಂದು ಇವತ್ತು ಹೇಗಿದ್ರು ಶುಕ್ರುವಾರ ಹೊರಗಡೆ ಹೋಗೋ ಪ್ಲಾನ್ಸ್ ಏನಾದ್ರು ಇದ್ಯ ಅಂತ ಲೋಕಾಭಿರಾಮವಾಗಿ ಮಾತಾಡ್ಕೊಂಡ್ ಬಂದ,ಕ್ರಿಸ್ ಮಾತಿಗೆ "ಆಂಡ್ರೆ" ಹೊರಗೆ ಎಲ್ಲಾದರೂ ಊಟಕ್ಕೆ ಹೋಗೋಣ ಅಂತಿದ್ದೀವಿ ನಿನಗೆ ಯಾವುದಾದರು ಒಳ್ಳೆ ರೆಸ್ಟೊರೆಂಟ್ ಗೊತ್ತಿದ್ದರೆ ಅಲ್ಲಿಗೆ ಗಾಡಿ ಹೊಡಿ ಅಂದು ಸುಮ್ಮನಾದ.ಇದನ್ನು ಕೇಳಿದ್ದೆ ತಡ ಕ್ರಿಸ್ "ಕಾರ್ನಿವೋರ್" ಗೆ ಎಂಬ ಹೆಸರಿನ ಹೋಟ್ಲು ಇಲ್ಲೆ ಹತ್ತಿರದಲ್ಲಿದೆ ,ತುಂಬಾ ವಿಶಿಷ್ಟವಾಗಿದೆ ,ನಿಮ್ಮೆಲ್ಲರಿಗೂ ಖಂಡಿತ ಇಷ್ಟ ಅಗುವುದು ಎಂಬ ಮಾತು ಮುಗಿಯುವ ಮುನ್ನವೆ ಗಾಡಿ ಸ್ಟಾರ್ಟ್ ಮಾಡ್ಬಿಟ್ಟ....ಧಡಿ ನನ್ಮಗ!!
ನಾವು ಹೊರಟಾಗ ಸಂಜೆ ೫:೩೦ ಅನ್ಸುತ್ತೆ....ಆಗ ತಾನೆ ಸೂರ್ಯ ತನ್ನ ಕೆಲಸ ಮುಗಿಸಿ ಮೊತಿ ಕೆಂಪಾಗಿ ಊದಿಸಿಕೊಂಡು ಮನೆ ಕಡೇ ಮುಖ ಮಾಡಿದ್ದ ,ಪಕ್ಷಿಗಳು ತಮ್ಮ ತಮ್ಮ ಡ್ಯೂಟಿ ಮುಗಿಸಿಕೊಂಡು ಗೂಡಿನ ಕಡೆ ರೆಕ್ಕೆ ಬಡಿದುಕೊಂಡು ಹಾರ್ತಾ ಇದ್ವು ,ಸಂಜೆಯ ಹೊತ್ತಿನಲ್ಲಿ ಸುಯ್ಯನೆ ತೇಲಿ ಬರುತಿದ್ದ ಇಬ್ಬನಿ ಮಿಶ್ರಿತ ಗಾಳಿ ಹೆಚ್ಚು ಕಮ್ಮಿ ನಮ್ಮ ಬೆಂಗಳೊರಿನ ಹವಾಗುಣದ ರೀತಿಯನ್ನೆ ನೆನಪಿಗೆ ತರುತಿತ್ತು. "ಮಿಡ್ರ್ಯಾಂಡ್ " (ನಾನು ವಾಸವಿದ್ದ ಸ್ಥಳ,ಜೋಹಾನ್ಸ್ ಬರ್ಗ್ ಅತಿ ಮುಖ್ಯವಾದ ಹೊರವಲಯ) ಯಿಂದ ಹೊರಟ ನಾವು ಗ್ಲೂಲಿ ಇಂಟರ್ ಸೆಕ್ಷನಲ್ಲಿ ಎನ್೩ ನಾರ್ಥ್ ಹೈವೇ ಸುತ್ತುವರೆದು ಮುಲ್ಡರ್ಸ್ ಡ್ರಿಫ್ಟ್ ಅಥವಾ ಡ್ರಿಫ್ಟ್ ಬೊಲಿವರ್ಡ್ ಎಂದು ಕರೆಯಲ್ಪಡುವ ಜಾಗಕ್ಕೆ ತಲುಪಿದೆವು.
" ಕಾರ್ನಿವೋರ್ " ಅಂತ ಮರದ ಹಲಗೆಯ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಮರದ ತುಂಡುಗಳಿಂದ ಜೋಡಿಸಿದ್ದರು ,ಆ ಹಲಗೆಯನ್ನು ಎರಡು ದೊಡ್ದ ಕಂಬಗಳ ಮಧ್ಯ ತೂಗು ಹಾಕಿದ್ದರು.ಗಾಡಿಯಿಂದಿಳಿದು ಮರದಿಂದ ನಿರ್ಮಿತವಾದ ಕಿರು ಸೇತುವೆಯನ್ನು ದಾಟಿದಾಗ ನಾನು ಕಂಡದ್ದು ಮರದ ದಿಮ್ಮಿಗಳಿಂದ ಕಟ್ಟಿದ್ದ ಗೋಡೆಗಳು ನಮ್ಮ ಮಲೆನಾಡಿನ ಮನೆಗಳನ್ನು ನೆನಪಿಗೆ ತರುವಂತಿತ್ತು,ವಿವಿಧ ಪ್ರಾಣಿಗಳ ಮರದ ಆಕೃತಿಗಳು,ಮರದ ಮೇಜು,ಮರ ಕುರ್ಚಿಗಳು.....ನಾವು ಒಂದು ಚಿಕ್ಕ ಅರಣ್ಯದಲ್ಲಿರುವಂತೆ ಭಾಸವಾಗುತಿತ್ತು.ನಮ್ಮ ಗುಂಪಿನಲ್ಲಿ ಇದ್ದ ೮ ಜನರು ದೊಡ್ಡ ಟೇಬಲನ್ನು ಆಕ್ರಮಿಸಿಕೊಂಡೆವು.ಈಗ ವಾಡಿಕೆಯಂತೆ " ತಿನ್ನೋಕೆ ಏನ್ ಏನಿದ್ಯಪ್ಪಾ " ಅಂತ ಕೇಳೋದು ನಮ್ ರೂಡೀ....ಆಗ ಅಲ್ಲಿಗೆ ಬಂದ ಮಾಣಿ (waiter) ಇವತ್ತು ನಾವು ಇಲ್ಲಿ ಏನ್ ಏನು ಎಷ್ಟ್ ಎಷ್ಟು ತಿನ್ನಬಹುದು ಅಂತ ಸಂಕ್ಷಿಪ್ತವಾಗಿ ವಿವರಿಸಿ ಹಿಂತಿರುಗಿದ,(ಆ ವೈಟರ್ ಚಿತ್ರ ಕೆಳಗಿದೆ ನೋಡಿ
).ಈ ವಿವರಣೆಯೇ ನನ್ನ ಅಂಕಣದ ಪ್ರಮುಖ ಅಂಶ,ಅದು ಏನೇಂದರೆ...................................................

ಈ ಹೋಟೆಲ್ ಪ್ರತಿ ದಿನ ೧೫ ರೀತಿಯ ಪ್ರಾಣಿ ಪಕ್ಷಿಗಳ ಮಾಂಸವನ್ನು ಗ್ರಾಹಕರಿಗೆ ಉಣಬಡಿಸುತ್ತದೆ, ಹಾರುವ,ನಡಿಯುವ,ಈಜುವ,ತೆವಳುವ, ಎಂಬ ಭೇಧ ಬಾವವಿಲ್ಲದೆ ಎಲ್ಲಾ ಪ್ರಾಣಿಗಳು ನಿಮ್ಮ ಸೇವೆಗೆ ಲಭ್ಯ, ಅದರಲ್ಲಿ ಕನಿಷ್ಠ ಪಕ್ಷ ೫ ಖಾದ್ಯವಾದರು "ಗೇಮ್ ಮೀಟ್" ಆಗಿರುವುದು ವಿಶೇಷ. ( ಗೇಮ್ ಮೀಟ್ -- ಸಾಕು ಪ್ರಾಣಿಗಳಲ್ಲದೆ ಮಾಂಸಕ್ಕಾಗಿಯೇ ಬೇಟೆಯಾಡಲ್ಪಡುವ "ಕಾಡು" ಪ್ರಾಣಿಗಳು ಎಂದೆನ್ನಬಹುದು, ಉದಾಹರಾಣೆಗೆ : ಜಿಂಕೆ,ಕಾಡುಹಂದಿ ಇತ್ಯಾದಿಗಾಳನ್ನು ಬೇಟೆಯಾಡಿಯೇ ತಿನ್ನಬೇಕಾಗುತ್ತದೆ....ಜಿಂಕೆ ನಿಷೇಧಿತ ಪ್ರಾಣಿ ಸುಮ್ಮನೆ ಉದಾಹರಣೆ ಕೊಟ್ಟೆ ಅಷ್ಟೆ.) ಇಂದು ನಮ್ಮ ಪಾಲಿಗೆ ಒಂಟೆ,ಮೊಸಳೆ,ಜಿರಾಫೆ,ಆಸ್ಟ್ರಿಚ್,ಜೀಬ್ರಾ,ಕಾಡು ಹಂದಿ,ಆಂಟಿಲೋಪ್,ಇಂಪಾಲ,ಗೋ ಮಾಂಸ,ಮೇಕೆ, ಕೋಳಿ,ಕಾಡು ಕೋಣ,ಆಫ್ರಿಕಾದ ಕಾಡಲ್ಲಿ ಸಿಗುವ ಪಾರಿವಾಳ ರೀತಿಯ ಪಕ್ಷಿಗಳು, ಔತಣ ಕೂಟಕ್ಕೆ ಸಜ್ಜಾಗಿದ್ದವು...ಇಲ್ಲಿ ಯಾವ ಯಾವ ಪ್ರಾಣಿ ತಿನ್ನಲು ಲಭ್ಯ ಎನ್ನುವಂತೆ ಅದರ ಚಿತ್ರಗಳನ್ನು ಸಹ ಈ ರೀತಿ ತೂಗು ಹಾಕಾಲಾಗಿತ್ತು.ಅದೃಷ್ಟವಶಾತ್ ಆವತ್ತು ನಮ್ಮ ಪಾಲಿಗೆ ಆನೆ ಹಾಗೂ ಹಾವು ಇರಲಿಲ್ಲ.,,,,ಇಷ್ಟೆಲ್ಲಾ ಪ್ರಾಣಿಗಳ ಹೆಸರು ಒಮ್ಮೆಲೆ ಕೇಳಿ ಸ್ವಲ್ಪ ಅಂಜಿಕೆ ಶುರುವಾಯಿತು,ನೀರಿಗೆ ಇಳಿದ್ದಿದ್ದಾಗಿದೆ ಇನ್ನು ಚಳಿಯೇನು ಮಳೆಯೇನು,ದನದ ಮಾಂಸ ಬಿಟ್ಟು ಇನ್ನೆಲ್ಲದರ ರುಚಿ ನೋಡೆಬಿಡೋಣ ಎಂದು ನಿರ್ಧರಿಸಿ ಅರಣ್ಯ ಭೋಜನಕ್ಕೆ ಸಿದ್ದನಾದೆ.
ಮೂದಲಿಗೆ ನಮ್ಮ ಟೇಬಲ್ ಮೇಲೆ ಬಂದಿದ್ದು ಸ್ಟಾರ್ಟರ್ಸ್...ಸೂಪ್ ಹಾಗೂ ಕಾರ್ನಿವೋರ್ ಹನಿ ಬ್ರೆಡ್ .
ನಂತರ ೬ ವಿಧವಾದ ಸಲಾಡ್ ಹಾಗೂ ಸಾಸ್ ,ಆ ಸಲಾಡ್ ಗಳಿಗೆ ಕನ್ನಡದಲ್ಲಿ ಏನಂತಾರೆ ಅಂತ ನನಗೂ ಗೊತ್ತಿಲ್ಲ,ಆ ಹೆಸರುಗಳು ಈ ರೀತಿಯಾಗಿ ಇತ್ತು..ಗ್ರೀಕ್,ಸಲ್ಸ,ಸ್ವೀಟ್ ಕಾರ್ನ್ ,ತ್ರಿ ಬೀನ್,ಬೇಬಿ ಮ್ಯಾರೊ,ಕೋಲ್ ಸ್ಲಾ.
ಇನ್ನು ಮಾಂಸಕ್ಕೆ ಸರಿ ಹೊಂದುವಂತಹ ಸಾಸ್ ಪಟ್ಟಿ ಹೇಗಿತ್ತೆಂದರೆ ಬೆಳ್ಳುಳ್ಳಿ,ಕುದುರೆ ಮೊಲಂಗಿ(horseradish)ಸೇಬು,ಮೆಣಸಿನಕಾಯಿ,ಮಿಂಟ್,ಕ್ರಾನ್ ಬೆರ್ರಿ...ಇದಲ್ಲದೆ ಇನ್ನು ಒಂದು ಸಾಸ್ ಇತ್ತು..ಆ ಸಾಸ್ ಹೆಸ್ರು ಭಲೇ ಮಜವಾಗಿತ್ತು.."ಚಕಲಕ ಸಾಸ್" ...ಸಖತ್ತಾಗಿದೆ ಅಲ್ವಾ ಹೆಸ್ರು....ಇದು ಅಫ್ರಿಕದಾ ಸಾಂಪ್ರದಾಯಿಕ ಸಾಸ್ ಅಂತೆ...ಜೊತೆಗೆ ಹುಳಿ ಮಿಶ್ರಿತ ಬೇಯಿಸಿದ ಬಿಸಿ ಆಲೂಗಡ್ದೆ ಕೂಡ ಸೈಡಲ್ಲಿ ಹಬೆಯಾಡುತಿತ್ತು.....ಆ ಸಾಸ್ ಹಾಗೂ ಸಲಾಡ್ ಹೀಗಿತ್ತು

ಈಗ ಊಟದ ಮುಖ್ಯ ಘಟ್ಟಕ್ಕೆ ಬರೋಣ ...ಅದೇ ಅರಣ್ಯ ರೋಧನ !!
ಇಲ್ಲಿ ದೊರೆಯುವ ಖಾದ್ಯಗಿಂತ ಮುಖ್ಯವಾಗಿ ಅದನ್ನು ಬಡಿಸುವ ರೀತಿ ಬಹು ಆಕರ್ಷಣೀಯವಾಗಿರುತ್ತದೆ.ದೊಡ್ಡ ದೊಡ್ಡ ಮಾಂಸದ ತುಂಡಿಗೆ ಕಾಡು ಜನರು ಉಪಯೋಗಿಸುವ ಕತ್ತಿ,ಈಟಿ ,ಭರ್ಜಿಗಳನ್ನು ಚುಚ್ಚಿ ದೊಡ್ಡ ವರ್ತುಲಾಕಾರದ ಗುಂಡಿಯ ಅಡಿಯಿಂದ ಉರಿಯುವ ಬೆಂಕಿಯ ಮೇಲೆ ಬೇಯಿಸುತ್ತಾರೆ.,,ಆ ಮಾಂಸವನ್ನು ಈಟಿಯ ಸಮೇತ ಬೆಂಕಿಯಿಂದ ತೆಗೆದು ಮೇಜಿನ ಬಳಿ ಬಂದು ನಮ್ಮ ಮುಂದಿರುವ ತಟ್ಟೆಯ ಮೇಲೆ ಈಟಿಯ ಒಂದು ಕೊನೆಯನ್ನು ಲಂಬವಾಗಿ ಇಟ್ಟು ಮಾಂಸದ ತುಂಡನ್ನು ನಮ್ಮ ತಟ್ಟೆಯ ಮೇಲೆ ಬೀಳುವಂತೆ ಸ್ವಲ್ಪವೇ ಕತ್ತರಿಸುತ್ತಾರೆ.ಅವರು ಕತ್ತರಿಸುವ ಸಮಯದಲ್ಲಿ ಆಗಷ್ಟೆ ಬೆಂಕಿಯಿಂದ ತೆಗೆದ ದೊಡ್ಡ ಮಾಂಸದ ತುಂಡು ಬಿಸಿ ಬಿಸಿ ಹೊಗೆ ಹೊರಗೆ ಹಾಕುತ್ತಿರುವುದು,ಅವರು ತಟ್ಟೆ ಮೇಲೆ ಇಟ್ಟು ಕತ್ತರಿಸುವ ಚಿತ್ರ ನೀವೆ ನೋಡಿ...

ಇದೇ ರೀತಿಯಾಗಿ ಎಲ್ಲಾ ಮಾಂಸವನ್ನು ಬಡಿಸುತ್ತಾರೆ,ನನಗೆ ಎಲ್ಲಾ ಪ್ರಾಣಿಗಳು ತುಂಬಾ ರುಚಿಯಾಗಿದ್ದವು ಅನ್ನಿಸಿತು,ಅದರಲ್ಲಿ ನನಗೆ ತುಂಬಾ ಇಷ್ಟ ಅಗಿದ್ದು ಎಂದರೆ "ಮೊಸಳೆ".....ಮೃಗಾಲಯದ ಕೊಳದಲ್ಲಿ ಯಾವಗಲೂ ಸೋಮಾರಿಯಾಗಿ ಮಲಗುವ ಈ ಮಕರ ಇಷ್ಟೊಂದು ರುಚಿಯಾಗಿರುತ್ತದೆ ಎಂದು ನನಗೆ ಅವತ್ತೆ ಗೊತ್ತಾಗಿದ್ದು...... ಎಲ್ಲಾ ಪ್ರಾಣಿಗಳ ಮಾಂಸವನ್ನು ಪ್ರೀತಿಯಿಂದ ತಿಂದು ಮುಗಿಸಿ,ಹೊಟ್ಟೆ ಭಾರವಾಗುವ ಸಮಯ ಹತ್ತಿರ ಬಂತು ಅನ್ನಿಸುತ್ತಿರುವಾಗಲೆ ಕೊನೇಲಿ ಬಂದ ಐಸ್ ಕ್ರೀಮ್ ಅಗ್ನಿ ಶಮನ ಮಾಡುವ ಮಳೆಯಂತೆ ನನ್ನ ಹೊಟ್ಟೆಯನ್ನು ಕೂಡ ತಂಪಾಗಿಸಿತು......

ಈಗ ಹೇಳಿ "ಮಾಂಸಹಾರಿಗಳಿಗೆ ಮಾತ್ರ" ಆನ್ನೋ ಟೈಟಲ್ ಇದಕ್ಕೆ ಒಪ್ಪುತ್ತಾ....??...ಒಪ್ಪಲ್ಲಾ ಅನ್ನೋದು ನಿಜ ಆದ್ರು ಸಸ್ಯಹಾರಿಗಳು ಕೂಡ ಇದನ್ನು ಓದಬಹುದು ತಾನೇ...........!!